ಬೆಂಗಳೂರು : ಕರ್ನಾಟಕ ಹೈಕೋರ್ಟ್ ಗೆ ಐವರು ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ವಕೀಲರು ಉಪವಾಸ ಸತ್ಯಾಗ್ರಹವನ್ನು ನಡೆಸಿ, ಕೇಂದ್ರ ಸರ್ಕಾರದ ಆದೇಶದ ಬಳಿಕ ಸತ್ಯಾಗ್ರಹವನ್ನು ಹಿಂಪಡೆದ ಬೆನ್ನಲ್ಲೇ ಐವರು ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಯಲಯ ಒಪ್ಪಿಗೆ ನೀಡಿದೆ.
ವಕೀಲರಾಗಿದ್ದ ಕೃಷ್ಣ ದೀಕ್ಷಿತ್ ಶ್ರೀಪಾದ, ಶಂಕರ ಗಣಪತಿ ಪಂಡಿತ್, ರಾಮಕೃಷ್ಣ ದೇವದಾಸ್, ಭೂತನ ಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್, ಸಿದ್ದಪ್ಪ ಸುನೀಲ್ ದತ್ ಯಾದವ್ ಅವರಿಗೆ ರಾಜ್ಯ ಹೈಕೋರ್ಟ್ ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಈ ವಕೀಲರನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಸುಪ್ರೀಂಕೋರ್ಟ್ಗೆ ಶಿಫಾರಸು ಮಾಡಿತ್ತು. ಅದರಂತೆ ಇದೇ ಫೆ.6 ರಂದು ಕಾನೂನು ಇಲಾಖೆ ಈ ಐವರನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಸಮ್ಮತಿಸಿ, ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿತ್ತು. ಅದನ್ನು ಅನುಮೋದಿಸಿರುವ ರಾಷ್ಟ್ರಪತಿ, ನ್ಯಾಯಮೂರ್ತಿಗಳ ನೇಮಕಕ್ಕೆ ಆದೇಶ ಹೊರಡಿಸಿದ್ದಾರೆ.