"ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು?"

‘ರಾಜ್ಯದ ಜನ ಈ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ನಿರ್ಮೂಲನೆಗೆ, ಜನರ ನೋವಿಗೆ ಪರಿಹಾರಕ್ಕೆ, ಜನರ ಜೇಬು ಪಿಕ್ ಪಾಕೆಟ್ ಆಗುತ್ತಿರುವುದನ್ನು ನಿಲ್ಲಿಸಲು ಜನ ಮೇ 10ರಂದು ಮತ ಚಲಾಯಿಸಲಿದ್ದಾರೆ’ ಎಂದು ತಿಳಿಸಿದರು.

Written by - Manjunath N | Last Updated : Mar 29, 2023, 04:46 PM IST
  • ‘ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ.
  • ಈ ಹಿಂದೆಯೇ ನೀತಿ ಸಂಹಿತೆ ಜಾರಿಯಾಗಬೇಕಿತ್ತು.
  • ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟು ದಿನ ಕಾಲ ಸಮಯ ತಳ್ಳಿದ್ದರು.
"ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು?" title=

ಬೆಂಗಳೂರು: ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದ ಕುರಿತಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ಕನಸು ಕಾಣುತ್ತಿದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು? ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದ್ದರೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಇಲ್ಲಿಗೆ ಕರೆಸಿ ತಾಲೂಕು, ಹೋಬಳಿ ಮಟ್ಟದಲ್ಲಿ ತಿರುಗಿಸುತ್ತಿದ್ದರು? ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ ಮೇಲೆ ಅಮಿತ್ ಶಾ ಹಾಗೂ ಇತರ ನಾಯಕರು ಶಾಸಕರು ಮಂತ್ರಿಗಳ ಮನೆ ಮನೆಗೆ ತಿರುಗುತ್ತಿದ್ದಾರೆ. ಈ ಹಿಂದೆ ಎಂದಾದರೂ ಈ ರೀತಿ ತಿರುಗಿದ್ದರಾ? ಅವರಲ್ಲಿರುವ ಭಯ ನಿಮ್ಮ ಕ್ಯಾಮೆರಾಗಳಲ್ಲಿ ಕಾಣುತ್ತಿದೆ’ ಎಂದು ತಿರುಗೇಟು ನೀಡಿದರು.

ರಾಜ್ಯದ ಜನ ನಿಮ್ಮ ಗ್ಯಾರಂಟಿಗೆ ಮತ ಹಾಕಬೇಕಾ, ಬಿಜೆಪಿಯ ಅಭಿವೃದ್ಧಿ ಭರವಸೆಗೆ ಮತ ಹಾಕಬೇಕಾ ಎಂದು ಕೇಳಿದಾಗ, ‘ರಾಜ್ಯದ ಜನ ಈ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ನಿರ್ಮೂಲನೆಗೆ, ಜನರ ನೋವಿಗೆ ಪರಿಹಾರಕ್ಕೆ, ಜನರ ಜೇಬು ಪಿಕ್ ಪಾಕೆಟ್ ಆಗುತ್ತಿರುವುದನ್ನು ನಿಲ್ಲಿಸಲು ಜನ ಮೇ 10ರಂದು ಮತ ಚಲಾಯಿಸಲಿದ್ದಾರೆ’ ಎಂದು ತಿಳಿಸಿದರು.

40% ಕಮಿಷನ್ ಎಂಬುದು ಪರಿಣಾಮ ಬೀರಿಲ್ಲ ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, ‘40% ಕಮಿಷನ್ ಎಂಬುದು ಜನರ ಮನಸ್ಸಿನಲ್ಲಿ ಹಚ್ಛೆಯಾಗಿದೆ. ಲೋಕಾಯುಕ್ತ ಸಂಸ್ಥೆ ಅದಕ್ಕೆ ಸ್ಟಾಂಪ್ ಒತ್ತಿದ್ದಾರೆ’ ಎಂದು ತಿಳಿಸಿದರು.ಆಯನೂರು ಮಂಜುನಾಥ್ ಅವರು ಯಾವಾಗ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಪ್ರಶ್ನೆಗೆ, ‘ನಾನು ಆ ಬಗ್ಗೆ ಮಾತನಾಡುವುದಿಲ್ಲ, ಇಂದು ಕೇವಲ ಚುನಾವಣೆ ದಿನಾಂಕ ಪ್ರಕಟ ವಿಚಾರವಾಗಿ ಮಾತನಾಡುತ್ತೇನೆ’ ಎಂದರು. 

ಇದನ್ನೂ ಓದಿ: "ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು"-ಯತ್ನಾಳ್ 

‘ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ. ಈ ಹಿಂದೆಯೇ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟು ದಿನ ಕಾಲ ಸಮಯ ತಳ್ಳಿದ್ದರು. ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ನಾವು ಇದನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಒಂದು ಹಂತದ ಚುನಾವಣೆ ನಡೆಸುವ ಆಯೋಗದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಆಯೋಗ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ತರಲು ನಿರ್ಧರಿಸಿದ್ದು, ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ನಮ್ಮ ಅಧಿಕಾರಿಗಳು ಈ ಬದಲಾವಣೆಗಳನ್ನು ತರುವ ಸಾಮರ್ಥ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಯಾವುದೇ ಅಧಿಕಾರಿ ಸರ್ಕಾರದ ಅಡಿಯಾಳಾಗುವುದಿಲ್ಲ ಎಂಬ ನಂಬಿಕೆ ಇದೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

ಚುನಾವಣಾ ಆಯೋಗ ಹೊಸ ಬದಲಾವಣೆ ತರುವ ಬಗ್ಗೆ ಕೇಳಿದಾಗ, ‘ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರ ಬಳಸಬಾರದು ಎಂದು ಮನವಿ ಮಾಡಿದ್ದೆವು. ಅವರು ಇಂದು 4.30ಕ್ಕೆ ಕರೆದಿದ್ದು, ಚುನಾವಣೆ ಸಮಯದಲ್ಲಿ ಬೂತ್ ಆರಂಭವಾಗುವ ಮುನ್ನ ಎಲ್ಲ ಪಕ್ಷದ ಬೂತ್ ಏಜೆಂಟರಿಗೆ 50 ಮತ ಹಾಕಿ ಪ್ರಯೋಗ ಮಾಡಿ ಮತದಾನ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇವೆ. ಅವರ ಈ ಕ್ರಮಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಸಿದ್ದರಾಮಯ್ಯ ಅವರು ಕೊನೆಯ ಚುನಾವಣೆ ಎಂದು ಹೇಳಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದಾಗ, ‘ಅವರ ಸ್ವಂತ ಅಭಿಪ್ರಾಯ ನಾನೇಕೆ ಬದಲಾವಣೆ ಮಾಡಲಿ? ಯಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಲು ಕೇಂದ್ರ ಚುನಾವಣಾ ಸಮಿತಿ ಇದೆ’ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ 21 ವರ್ಷದ ತ್ರಿವೇಣಿ ಬಳ್ಳಾರಿ ಮೇಯರ್ ಆಗಿ ಆಯ್ಕೆ!

ಕಾಂಗ್ರೆಸ್ ಜೆಡಿಎಸ್ ಹೈದರಾಬಾದ್ ನಲ್ಲಿ ಹಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ತೆಲಂಗಾಣ, ಕರ್ನಾಟಕದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲವೇ? ನಾವು ಕೇವಲ ರಾಜ್ಯದ ಜನರ ಜತೆಗೆ ಹೊಂದಾಣಿಕೆಯಾಗಿದ್ದೇವೆ’ ಎಂದು ತಿಳಿಸಿದರು.

ಏಪ್ರಿಲ್ 5ರಿಂದ ಸತ್ಯಮೇವ ಜಯತೆ ಹೋರಾಟ ಆರಂಭ:

ಏಪ್ರಿಲ್ 5ರಂದು ರಾಹುಲ್ ಗಾಂಧಿ ಅವರು ಅದೇ ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ಸತ್ಯ ಮೇಯ ಜಯತೆ ಹೋರಾಟವನ್ನು ದೇಶದುದ್ದಗಲಕ್ಕೆ ಆರಂಭಿಸುತ್ತಿದ್ದಾರೆ. ನಾವು ಇಲ್ಲಿಂದಲೇ ಹೋರಾಟ ಆರಂಭಿಸಲು ಮನವಿ ಮಾಡಿದ್ದು, ಅವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ, ರಾಜ್ಯ ಹಾಗೂ ದೇಶದಲ್ಲಿ ಹೊಸ ಬದಲಾವಣೆ ಗಾಳಿ ಬೀಸಲು ಹೋರಾಟ ಮಾಡಲಿದ್ದಾರೆ. ಬಿಜೆಪಿ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪಾದಯಾತ್ರೆ ಮಾಡಿ ಜನರ ಮನ ಗೆದ್ದಿರುವುದಕ್ಕೆ ಬಿಜೆಪಿಯವರು ಈ ಸ್ಥಿತಿ ತಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News