ಪ್ರಧಾನಿ ಮೋದಿಯವರೇ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ?: ಕಾಂಗ್ರೆಸ್

ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ನಳೀನ್ ಕುಮಾರ್ ಕಟೀಲ್ ಇದಕ್ಕೆ ಉತ್ತರಿಸಬೇಕು. ಗೋಮೂತ್ರವೋ, ಗೋಮಯವೋ!? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Written by - Puttaraj K Alur | Last Updated : Mar 18, 2023, 08:21 PM IST
  • ಮುಂದಿನ ಬಾರಿ ಬಂದಾಗ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ?
  • ಫೈಟರ್ ರವಿ ಎದುರು ಕೈಮುಗಿದು ನಿಂತ ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ
  • ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ
ಪ್ರಧಾನಿ ಮೋದಿಯವರೇ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ?: ಕಾಂಗ್ರೆಸ್  title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ರೌಡಿ ಶೀಟರ್‌ ಸೈಲೆಂಟ್ ಸುನೀಲ ಸೇರಿದಂತೆ ಇತರೆ ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಇದೇ ವಿಚಾರವಾಗಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.

#BJPRowdyMorcha ಹ್ಯಾಶ್‍ಟ್ಯಾಗ್‍ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಫೈಟರ್ ರವಿ ಎದುರು ಕೈಮುಗಿದು ನಿಂತ ಪ್ರಧಾನಿ ಮೋದಿಯವರೇ, ಮುಂದಿನ ಬಾರಿ ಬಂದಾಗ ಮತ್ತೊಬ್ಬ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ ನಿಮ್ಮ ವಿವೇಚನೆಗೆ ಬಿಟ್ಟಿದ್ದು! ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ನಮ್ಮ ಕೆಲಸಗಳ ಆಧಾರದ ಮೇಲೆ ನಮ್ಮನ್ನು ಆಯ್ಕೆ ಮಾಡಿ

‘ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ #BJPRowdyMorchaಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ! ಯಾವುದೇ ಕಾರಣಕ್ಕೂ ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಸಿಎಂ ಬೊಮ್ಮಾಯಿಯವರೇ ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪಶ್ಚಿಮ ಬಂಗಾಳ, ಕೇರಳದ RSS ಕಚೇರಿಗಳಲ್ಲಿ ಗನ್ನು, ಗ್ರೆನೇಡ್, ಬಾಂಬುಗಳು ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಇನ್ನು ಮುಂದೆ ಲಾಂಗು, ಮಚ್ಚು, ಡ್ರ್ಯಾಗರ್‌ಗಳ ಸಂಗ್ರಹ ಇರಲಿದೆ! ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ನಳೀನ್ ಕುಮಾರ್ ಕಟೀಲ್ ಇದಕ್ಕೆ ಉತ್ತರಿಸಬೇಕು. ಗೋಮೂತ್ರವೋ, ಗೋಮಯವೋ!?’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ: Karnataka Congress : ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 100 ಅಭ್ಯರ್ಥಿಗಳು ಅಂತಿಮ!

‘"ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ" ನಳೀನ್ ಕುಮಾರ್ ಕಟೀಲ್ ಅವರೇ ಈ ಹಿಂದೆ ನೀವೇ ಹೇಳಿದ್ದಲ್ಲವೇ ಇದು? ನಿಮ್ಮ ಬಾಯಲ್ಲಿರುವ ನಾಲಿಗೆಗಳೆಷ್ಟು? ನಿಮ್ಮ ಮಾತುಗಳಿಗೆ ಇರುವ ಬದ್ಧತೆ ಎಷ್ಟು? ಬಿಜೆಪಿ ಪಕ್ಷ ನಿಮ್ಮ ಹಿಡಿತದಲ್ಲಿಲ್ಲವೇ? ಅಥವಾ ಮೋದಿ ಆಜ್ಞೆಯಂತೆ ಸೇರಿಸಿಕೊಂಡಿರಾ?’ ಅಂತಾ ಕಾಂಗ್ರೆಸ್ ಕುಟುಕಿದೆ.

‘ಬಿಜೆಪಿಗರ ಬಾಯೊಳಗೆ ಅಲ್ಲಾಡುತ್ತಿರುವುದು ನಾಲಿಗೆಯೋ, ಎರಡು ತಲೆಯ ಹಾವೋ ಎಂಬ ಅನುಮಾನ ಶುರುವಾಗಿದೆ! ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದಿದ್ದ ಸಿಎಂ ಬೊಮ್ಮಾಯಿಯವರೇ, ಆಡಿದ ಮಾತಿಗೆ ಕನಿಷ್ಠ ಬದ್ಧತೆ ತೋರಿಸದೆ ಯಾರ ಕಿವಿ ಮೇಲೆ ಹೂವಿಡುತ್ತಿದ್ದೀರಿ? ನಿಮ್ಮ ಯಾವ ಮಾತನ್ನು ಜನ ನಂಬಬೇಕು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News