ರೇಪ್ ಇನ್ ಇಂಡಿಯಾ ಹೇಳಿಕೆಗೆ ನಾನು ಕ್ಷಮೆಯಚಿಸುವುದಿಲ್ಲ: ರಾಹುಲ್

ಪೂರ್ವೋತ್ತರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ನನ್ನ ಹೇಳಿಕೆ ಮೇಲೆ ವಿವಾದ ಸೃಷ್ಟಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Last Updated : Dec 13, 2019, 03:54 PM IST
ರೇಪ್ ಇನ್ ಇಂಡಿಯಾ ಹೇಳಿಕೆಗೆ ನಾನು ಕ್ಷಮೆಯಚಿಸುವುದಿಲ್ಲ: ರಾಹುಲ್ title=
Photo courtesy: ANI

ನವದೆಹಲಿ: 'ರೇಪ್ ಇನ್ ಇಂಡಿಯಾ' ಕುರಿತಾದ ತಮ್ಮ ಹೇಳಿಕೆಗೆ ತಾವು ಕ್ಷಮೆಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸಂಸತ್ತಿನ ಎರಡೂ ಸದನಗಳಲ್ಲಿ ಮತ್ತು ವಿಶೇಷವಾಗಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಭಾರಿ ಕೋಲಾಹಲ ಸೃಷ್ಟಿಯಾಗಿದೆ.

ಈ ಕುರಿತು ಮಾತನಾಡಿರುವ ರಾಹುಲ್ "ನನ್ನ ಸ್ಮಾರ್ಟ್ ಫೋನ್ ನಲ್ಲಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ಒಂದು ಕ್ಲಿಪ್ ಇದ್ದು, ಅದರಲ್ಲಿ ಅವರು ದೆಹಲಿಯನ್ನು 'ರೇಪ್ ಕ್ಯಾಪಿಟಲ್' ಎಂದು ಕರೆದಿದ್ದರು, ಶೀಘ್ರವೇ ಈ ಕ್ಲಿಪ್ ಅನ್ನು ಟ್ವೀಟ್ ಮಾಡುವೆ. ಪೂರ್ವೋತ್ತರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ನನ್ನ ಹೇಳಿಕೆ ಮೇಲೆ ವಿವಾದ ಸೃಷ್ಟಿಸುತ್ತಿದೆ" ಎಂದಿದ್ದಾರೆ.

ತಮ್ಮ ಹೇಳಿಕೆಗೆ ರಾಹುಲ್ ಕ್ಷಮೆಯಾಚಿಸಬೇಕು ಎಂದು ಕೋರಿ ಬಿಜೆಪಿ ಸಂಸದರು ಸಂಸತ್ತಿನ ಎರಡು ಸದನಗಳಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ಸದನದ ಕಾರ್ಯಕಲಾಪವನ್ನು ಅನಿಶ್ಚಿತ ಕಾಲದವರೆಗೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ ಮಾತನಾಡಿದ್ದ ಬಿಜೆಪಿ ಸಂಸದೆ ಸ್ಮೃತಿ ಇರಾನಿ " ಯಾವುದೇ ಓರ್ವ ಮುಖಂಡ ಸ್ಪಷ್ಟವಾಗಿ ಭಾರತೀಯ ಮಹಿಳೆಯರ ಮೇಲೆ ಅತ್ಯಾಚಾರ ಎಸಗಬೇಕು ಎಂದು ಹೇಳುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂದಿದ್ದರು. ಅಷ್ಟೇ ಅಲ್ಲ ಇದನ್ನು ನಾವು ದೇಶದ ಜನರಿಗೆ ರಾಹುಲ್ ನೀಡುತ್ತಿರುವ ಸಂದೇಶವೆಂದು ಭಾವಿಸಬೇಕೆ? " ಎಂದು ಪ್ರಶ್ನಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಇದರಿಂದ ತಾವು ಆಘಾತಕ್ಕೊಳಗಾಗಿದ್ದು, ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ಇಂತಹ ಶಬ್ದಗಳನ್ನು ಪ್ರಯೋಗಿಸುವ ಜನರು ಸಂಸತ್ತಿನಲ್ಲಿ ಪ್ರವೇಶಿಸಬೇಕೆ? ಇಂತಹ ಜನರು ಇಡೀ ಸದನಕ್ಕೆ ಹಾಗೂ ದೇಶಕ್ಕೆ ಕ್ಷಮೆಯಾಚಿಸಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಅತ್ತ ರಾಜ್ಯಸಭೆಯಲ್ಲಿಯೂ ಕೂಡ ಸಂಸದರು ರಾಹುಲ್ ಗಾಂಧಿ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, "ಸದನದ ಸದಸ್ಯರಾಗಿರದೆ ಇರುವ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸುವುದು ಉಚಿತವಲ್ಲ" ಎಂದು ಚಾಟಿ ಬೀಸಿದ್ದಾರೆ.

Trending News