ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ಹೆಚ್ಚಿದ ಹಿಂಸಾಚಾರ, 31 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಗಣರಾಜ್ಯೋತ್ಸವ ದಿನದಂದು ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ 22 ವರ್ಷದ ಯುವಕನೊಬ್ಬನ ಹತ್ಯೆಯ ನಂತರ ಹಿಂಸಾಚಾರ ಭುಗಿಲೆದ್ದ ಕಾರಣ, ನಗರದಲ್ಲಿ ಶಾಂತಿಗೆ ಭಂಗ ತಂದ  31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.   

Last Updated : Jan 27, 2018, 06:31 PM IST
  • ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ ಭುಗಿಲೆದ್ದ ಹಿಂಸಾಚಾರ.
  • ಕಲ್ಲು ತೂರಾಟ, ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯ.
  • ಪ್ರಕರಣ ಸಂಬಂಧ 31 ಆರೋಪಿಗಳ ಬಂಧನ.
  • ಹಿಂಸಾಚಾರದಲ್ಲಿ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆಯಲ್ಲದೆ 12ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.
  • ಕಾಸ್‌ಗಂಜ್‌ನಾದ್ಯಂತ ಕರ್ಫ್ಯೂ ಹೇರಲಾಗಿದ್ದು, ಭಾರೀ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ.
  • ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ.
ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ಹೆಚ್ಚಿದ ಹಿಂಸಾಚಾರ, 31 ಮಂದಿ ಬಂಧನ, ನಿಷೇಧಾಜ್ಞೆ ಜಾರಿ title=

ಲಕ್ನೋ : ಗಣರಾಜ್ಯೋತ್ಸವ ದಿನದಂದು ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ 22 ವರ್ಷದ ಯುವಕನೊಬ್ಬನ ಹತ್ಯೆಯ ನಂತರ ಹಿಂಸಾಚಾರ ಭುಗಿಲೆದ್ದ ಕಾರಣ, ನಗರದಲ್ಲಿ ಶಾಂತಿಗೆ ಭಂಗ ತಂದ  31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಇತ್ತೀಚಿನ ವರದಿಗಳ ಪ್ರಕಾರ, ಈ ಪ್ರಕರಣದ ಕುರಿತು ತನಿಖೆ ನಡೆಸಿ, ಈ ಘಟನೆಗೆ ಕಾರಣರಾದ ಶಂಕಿತ ಆರೋಪಿಗಳನ್ನು ಪತ್ತೆಹಚ್ಚಲು ಉತ್ತರಪ್ರದೇಶ ಪೋಲಿಸ್ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಜ.26ರಂದು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಯುವಕರ ತಂಡವೊಂದು ಹಮ್ಮಿಕೊಂಡಿದ್ದ ತ್ರಿರಂಗ ಯಾತ್ರೆಯಲ್ಲಿ ಅಪರಿಚಿತರು ಕಲ್ಲುತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ 16 ವರ್ಷದ ಬಾಲಕ ಮೃತಪಟ್ಟಿದ್ದು, ಇಬ್ಬರಿಗೂ ಹೆಚ್ಚು ಮಂದಿ ಗಾಯಗೊಂಡಿದ್ದರು. 

ಆ ಬಳಿಕ ನಗರದಲ್ಲಿ ಹಿಂಸಾಚಾರ ಭುಗಿಲೆದ್ದು, ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆಯಲ್ಲದೆ 12ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಪಿ.ಸಿಂಗ್, ಕಲ್ಲು ತೂರಾಟ, ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಮೃತ ಬಾಲಕನನ್ನು ಚಂದನ್(16) ಎಂದು ಗುರುತಿಸಲಾಗಿದೆ. ಅಲ್ಲದೆ, ಕಾಸ್‌ಗಂಜ್‌ನಾದ್ಯಂತ  ಕರ್ಫ್ಯೂ ಹೇರಲಾಗಿದೆ. ಭಾರೀ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.  

ಇದೆ ವೇಳೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೃತನ ಆತ್ಮಕ್ಕೆ ಶಾಂತಿ ಕೋರಿದ್ದು, ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ, ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದ್ದು, ಎರಡು ಅಂಗಡಿಗಳು ಮತ್ತು ಒಂದು ಬಸ್ ಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ, ಈ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Trending News