ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ; ಮಮತಾ ಬ್ಯಾನರ್ಜಿಗೆ ಶಾಕ್!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುವುದಾಗಿ ಬಿಜೆಪಿಗೆ ಸೇರ್ಪಡೆಗೊಂಡ ಸಂಸದ ಸೌಮಿಟ್ರಾ ಖಾನ್ ಹೇಳಿದ್ದಾರೆ.

Last Updated : Jan 9, 2019, 06:14 PM IST
ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ; ಮಮತಾ ಬ್ಯಾನರ್ಜಿಗೆ ಶಾಕ್! title=

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲೇ ತೃಣಮೂಲ ಕಾಂಗ್ರೆಸ್ ಸಂಸದ ಸೌಮಿತ್ರಾ ಖಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿನ್ನಡೆಯಾದಂತಾಗಿದೆ. 

ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಮುಕ್ಹಲ್ ರಾಯ್ ಅವರ ಸಮ್ಮುಖದಲ್ಲಿ ಸಂಸದ ಸೌಮಿತ್ರ ಖಾನ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌಮಿತ್ರಾ ಖಾನ್, "ಪಶ್ಚಿಮ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ ಮತ್ತು ಪೊಲೀಸ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ಕಳೆದಂತೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ತೃಣಮೂಲ ಕಾಂಗ್ರೆಸ್ ಸಮಾಜ ಘಾತುಕ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ. ಇದರಿಂದಾಗಿ ಅಪರಾಧ ಕೃತ್ಯಗಳಿ ಬಂಗಾಳದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಟಿಎಂಸಿ ತೊರೆದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ" ಎಂದು ಹೇಳಿದರು

ಪಶ್ಚಿಮ ಬಂಗಾಳದ ಬಿಸ್ನುಪುರ್ ಕ್ಷೇತ್ರದ ಸಂಸದರಾಗಿರುವ ಸೌಮಿತ್ರ ಖಾನ್ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದರು. ಅಲ್ಲದೆ, ಸದ್ಯ ಇವರೊಂದಿಗೆ ಇನ್ನೂ ಐವರು ಸಂಸದರು ಸಂಪರ್ಕದಲ್ಲಿದ್ದು, ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Trending News