ನವದೆಹಲಿ: ದೀರ್ಘಾವಧಿಯಿಂದ 7ನೇ ವೇತನ ಆಯೋಗಕ್ಕಾಗಿ ಒತ್ತಾಯಿಸುತ್ತಿರುವ ಸರ್ಕಾರಿ ವೈದ್ಯರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಮುಷ್ಕರ ಕೈಗೊಂಡಿದ್ದಾರೆ. ದೆಹಲಿಯ ವಿವಿಧ ಸರ್ಕಾರಿ ಆಸ್ಪತ್ರೆಗಳ ಸುಮಾರು 3000 ವೈದ್ಯರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಬೇಡಿಕೆಯನ್ನು ಪೂರೈಸದಿದ್ದರೆ ಡಿಸೆಂಬರ್ 20 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ವೈದ್ಯರ ಮುಷ್ಕರದಿಂದಾಗಿ ದೆಹಲಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ರೋಗಿಗಳು ಪರದಾಡುವಂತಾಗಿದೆ.
ಸಹಾಯಕ ವೆಬ್ಸೈಟ್ ಝೀಬಿಜ್ ಪ್ರಕಾರ, ದೆಹಲಿ ಸರ್ಕಾರದ ಎಲ್ಲ ವೈದ್ಯಕೀಯ ಕಾಲೇಜುಗಳ (ಜಿಟಿಬಿ, ಎಂಎಎಂಸಿ, ಅಂಬೇಡ್ಕರ್, ಡಿಡಿಯು ಮತ್ತು ಸಂಜಯ್ ಗಾಂಧಿ ಸ್ಮಾರಕ) ನಿವಾಸಿ ವೈದ್ಯರು ಈ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ತಮ್ಮ ಬೇಡಿಕೆಗಳನ್ನು ತಕ್ಷಣವೇ ಪೂರೈಸದಿದ್ದರೆ ಡಿಸೆಂಬರ್ 20 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಇದು ತುರ್ತು ಸೇವೆಗೆ ಪರಿಣಾಮ ಬೀರುವುದಿಲ್ಲ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ದೀರ್ಘಾವದಿಯಿಂದ 7ನೇ ವೇತನ ಆಯೋಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬಳಿ ಮತ್ತೆ ಮತ್ತೆ ಮನವಿ ಮಾಡಲಾಗಿಯೂ ಭರವಸೆ ಹೊರತುಪಡಿಸಿ ವೈದ್ಯರಿಗೆ ಏನೂ ಸಿಗಲಿಲ್ಲ. ಈ ಪರಿಸ್ಥಿತಿಯಲ್ಲಿ, ಮುಷ್ಕರವನ್ನು ಹೊರತುಪಡಿಸಿ ವೈದ್ಯರಿಗೆ ಬೇರೆ ಯಾವುದೇ ಆಯ್ಕೆಯಿಲ್ಲ ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಆನಂದ್ ಕುಮಾರ್ ಚೋಪ್ರಾ ಹೇಳಿದ್ದಾರೆ.
ಡಿಸೆಂಬರ್ 19 ರಂದು ಮುಷ್ಕರದ ಬಳಿಕವೂ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 20 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.