ಶಿವಸೇನೆ ಜೊತೆಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ; ಶರದ್ ಪವಾರ್

ಕಳೆದ 25 ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿವೆ. ಇಂದು ಇಲ್ಲದಿದ್ದರೆ, ನಾಳೆ ಅವರು ಮತ್ತೆ ಒಂದಾಗುತ್ತಾರೆ. ಜನರು ಅವರಿಗೆ ಸರ್ಕಾರ ರಚಿಸುವ ಆದೇಶ ನೀಡಿದ್ದಾರೆ. ಆದ್ದರಿಂದ, ಅವರು ಆದಷ್ಟು ಬೇಗ ಸರ್ಕಾರ ರಚಿಸಬೇಕು ಎಂದು ಶರದ್ ಪವಾರ್ ಹೇಳಿದ್ದಾರೆ.

Last Updated : Nov 6, 2019, 04:15 PM IST
ಶಿವಸೇನೆ ಜೊತೆಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ; ಶರದ್ ಪವಾರ್ title=
Photo Courtesy: ANI

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra Assembly Elections 2019)  ಶಿವಸೇನೆ ಜೊತೆಗಿನ ಮೈತ್ರಿ ಊಹಾಪೋಹಗಳಿಗೆ ಅಂತ್ಯ ಹಾಡಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ ಮತ್ತು ಎನ್‌ಸಿಪಿ ನಡುವೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ. ಜನತೆಯಿಂದ ನಮಗೆ ಪ್ರತಿಪಕ್ಷಗಳಲ್ಲಿ ಕುಳಿತುಕೊಳ್ಳುವ ಆದೇಶ ಸಿಕ್ಕಿದೆ. ಕಳೆದ 25 ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿವೆ. ಇಂದು ಇಲ್ಲದಿದ್ದರೆ, ನಾಳೆ ಅವರು ಮತ್ತೆ ಒಂದಾಗುತ್ತಾರೆ. ಜನರು ಅವರಿಗೆ ಸರ್ಕಾರ ರಚಿಸುವ ಆದೇಶ ನೀಡಿದ್ದಾರೆ. ಆದ್ದರಿಂದ, ಅವರು ಆದಷ್ಟು ಬೇಗ ಸರ್ಕಾರ ರಚಿಸಬೇಕು ಎಂದು ಶರದ್ ಪವಾರ್ ಹೇಳಿದ್ದಾರೆ. 

ಶಿವಸೇನೆ ಮುಖಂಡ ಸಂಜಯ್ ರೌತ್ ಇಂದು ಬೆಳಿಗ್ಗೆ ಶರದ್ ಪವಾರ್ ಅವರನ್ನು ಭೇಟಿಯಾದರು. ಬಳಿಕ ಶಿವಸೇನೆ-ಎನ್‌ಸಿಪಿ 50-50 ಸೂತ್ರದಡಿ ಸರ್ಕಾರ ರಚಿಸುತ್ತದೆ ಎಂಬ ಊಹಾಪೋಹಗಳಿಗೆ ಪುಷ್ಟಿ ದೊರೆತಂತಾಗಿತ್ತು. ಈ ಕುರಿತು ಶರದ್ ಪವಾರ್ ಅವರು ಸಂಜಯ್ ರೌತ್ ಅವರೊಂದಿಗಿನ ಸಭೆ ಸಕಾರಾತ್ಮಕವಾಗಿದೆ ಎಂದು ಹೇಳಿದ್ದರು. ಸಂಜಯ್ ರೌತ್ ಮುಂಬರುವ ರಾಜ್ಯಸಭಾ ಅಧಿವೇಶನದ ಕುರಿತು ಮಾತನಾಡಿದರು. ನಾವು ಇದೇ ರೀತಿಯ ನಿಲುವನ್ನು ಹೊಂದಿರುವ ಇತರ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ ಎಂದಿದ್ದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇರೆ ಯಾವುದೇ ಆಯ್ಕೆ ಇರುವ ಸಾಧ್ಯತೆಯ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚಿಸುವ ಒಂದೇ ಒಂದು ಆಯ್ಕೆ ಇದೆ ಎಂದು ಹೇಳಿದರು. ರಾಷ್ಟ್ರಪತಿಗಳ ಆಡಳಿತವನ್ನು ತಪ್ಪಿಸುವ ಏಕೈಕ ಆಯ್ಕೆ ಇದು ಎಂದರು.

ದೇವೇಂದ್ರ ಫಡ್ನವೀಸ್ ಸಭೆ:
ಏತನ್ಮಧ್ಯೆ, ಸಿಎಂ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಸಚಿವರ ಸಭೆ ನಡೆಯುತ್ತಿದೆ. ಅಕಾಲಿಕ ಮಳೆಯ ನಂತರ, ರೈತರಿಗೆ ಪರಿಹಾರ ಒದಗಿಸುವುದರ ಜೊತೆಗೆ ಸರ್ಕಾರ ರಚನೆಯ ಕುರಿತು ಸಭೆ ನಡೆಯಲಿದೆ. ಸಭೆಗೆ ಬಿಜೆಪಿ ಶಾಸಕರು ಮಾತ್ರವಲ್ಲದೆ, ಶಿವಸೇನೆಯ ಶಾಸಕರೂ ಕೂಡ ಭಾಗಿಯಾಗಿದ್ದಾರೆ.

Trending News