ಚೆನ್ನೈ: ತಮಿಳುನಾಡು ಸರ್ಕಾರ ಉದ್ಯೋಗಿಗಳಿಗೆ ಉಡುಗೆಗೆ ಸಂಬಂಧಿಸಿದಂತೆ ಆದೇಶವನ್ನು ಜಾರಿ ಮಾಡಿದೆ. ಇದರಲ್ಲಿ ಸರ್ಕಾರಿ ಉದ್ಯೋಗಿಗಳು ವೆಸ್ಟೆರ್ನ್ ಉಡುಪನ್ನು ಧರಿಸುವ ಬದಲಿಗೆ ಭಾರತೀಯ ಮತ್ತು ತಮಿಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಲಾಗಿದೆ. ತಮಿಳುನಾಡು ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಿರೀಜಾ ವೈದ್ಯನಾಥನ್ ಈ ಆದೇಶ ಹೊರಡಿಸಿದ್ದು, ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗಿಗಳು "ಔಪಚಾರಿಕ ಉಡುಪಿನ ಬದಲಿಗೆ ಫ್ಯಾಶನ್" ಬಟ್ಟೆಗಳನ್ನು ಧರಿಸುತ್ತಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಸರ್ಕಾರ ಈ ಆಜ್ಞೆ ಹೊರಡಿಸಿದೆ ಎಂದು ಹೇಳಲಾಗಿದೆ.
ಮೇ 28, 2019 ರಲ್ಲಿ ಸರ್ಕಾರಿ ಆದೇಶದ (ಜಿಒ) ಮೂಲಕ, "ತಮಿಳುನಾಡು ಸರ್ಕಾರವು "ಡ್ರೆಸ್ ಕೋಡ್"(ಉಡುಗೆ ನೀತಿ) ತಿದ್ದುಪಡಿ ಮಾಡುವ ಈ ಆದೇಶವನ್ನು ಜಾರಿಗೊಳಿಸಿದೆ.
ಮುಖ್ಯ ಕಾರ್ಯದರ್ಶಿ ಗಿರಿಜ ವೈದ್ಯನಾಥನ್ ಅವರು ಶನಿವಾರ ಪರಿಷ್ಕೃತ ಆದೇಶ ಹೊರಡಿಸಿದ್ದು, "ಕೆಲಸದ ಸ್ಥಳಕ್ಕೆ ಸೂಕ್ತವಾದ ಸ್ವಚ್ಛ, ಔಪಚಾರಿಕ ಉಡುಪನ್ನು ಧರಿಸುವುದು ಸರ್ಕಾರಿ ಉದ್ಯೋಗಿಗಳಿಗೆ ಅವಶ್ಯಕವಾಗಿರುತ್ತದೆ. ಆದ್ದರಿಂದ ಕಚೇರಿಯ ಶಿಸ್ತನ್ನು ಕಾಯ್ದುಕೊಳ್ಳಲು, ಸರ್ಕಾರಿ ಉದ್ಯೋಗಿಗಳು ನಮ್ಮ ತಮಿಳು ಸಂಸ್ಕೃತಿ ಅಥವಾ ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುವ ವಸ್ತ್ರವನ್ನು ಧರಿಸುವಂತೆ ಈ ಆದೇಶ ಹೊರಡಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವ ಪುರುಷ ಉದ್ಯೋಗಿಗಳು ಕರ್ತವ್ಯದಲ್ಲಿದ್ದಾಗ ಔಪಚಾರಿಕ ಪ್ಯಾಂಟ್ ಅಥವಾ ವೇಶ್ತಿ (ಧೋತಿ) ಜೊತೆಗೆ ಶರ್ಟ್ ಧರಿಸಬೇಕು. ಸ್ತ್ರೀ ಉದ್ಯೋಗಿಗಳು ಸೀರೆ ಅಥವಾ ದುಪ್ಪಟ್ಟದೊಂದಿಗೆ ಸಲ್ವಾರ್ ಕಮೀಜ್ ಅಥವಾ ಚೂಡಿದಾರ್ ಧರಿಸಬೇಕು. ಕ್ಯಾಶುಯಲ್ ಉಡುಗೆಯನ್ನು ತಪ್ಪಿಸಬೇಕು" ಎಂದು ಹೇಳಿದ್ದಾರೆ.
ಇದರಲ್ಲಿ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗಿಗಳು ನಮ್ಮ(ಭಾರತೀಯ ಮತ್ತು ತಮಿಳುನಾಡಿನ) ಸಾಂಪ್ರದಾಯಿಕ ಉಡುಗೆ ತೊಡುವ ಬದಲಿಗೆ ವಿದೇಶಿ ಉಡುಗೆ ತೊಟ್ಟು ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ ತಮಿಳುನಾಡು ಸರ್ಕಾರ ಎರಡು ಸರ್ಕಾರಿ ಆದೇಶ(GO) ನೀಡಿದೆ ಎಂಬುದು ಗಮನಿಸಬೇಕಾದ ಅಂಶ. ಮೇ 28 ರಂದು ಮೊದಲ ಜಿಒ ಬಿಡುಗಡೆಯಾಯಿತು, ಇದು ಮೂಲತಃ ತಮಿಳುನಾಡಿನ ಸಚಿವಾಲಯದ ಕಚೇರಿ ಕೈಪಿಡಿಯ ತಿದ್ದುಪಡಿಯಾಗಿದೆ. ಪುರುಷರು ಔಪಚಾರಿಕ ಪ್ಯಾಂಟ್ನೊಂದಿಗೆ ಶರ್ಟ್ಗಳನ್ನು ಧರಿಸಬೇಕು, ಮಹಿಳೆಯರು " ಔಪಚಾರಿಕ ಉಡುಪುಗಳಾದ ಸೀರೆ ಅಥವಾ ಸಲ್ವಾರ್ ಕಮೀಜ್ ಅಥವಾ ಚೂಡಿದಾರ್ ಅನ್ನು" ಧರಿಸಬೇಕೆಂದು ಹೇಳಿದೆ. ಜೂನ್ 1 ರಂದು ಎರಡನೇ ಕ್ರಮಾಂಕವನ್ನು ನೀಡಲಾಯಿತು. ಇದರಲ್ಲಿ ಪುರುಷರು "ಧೋತಿ" ಅನ್ನು ಧರಿಸಬಹುದು ಎಂದು ಸೇರಿಸಲಾಗಿದೆ. ಇದು "ತಮಿಳು ಸಂಸ್ಕೃತಿಯನ್ನು ಬಿಂಬಿಸುತ್ತದೆ".