ಗ್ಯಾಂಗ್ ರೇಪ್ ಸಂತ್ರಸ್ತೆ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಆದೇಶ

ಸಂತ್ರಸ್ತ ಮಹಿಳೆ ಅಲೆಮಾರಿ ಜೀವನ ನಡೆಸುತ್ತಿದ್ದಾಳೆ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಾಸಿಸಲು ಮನೆಯನ್ನೂ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ. 

Last Updated : Apr 23, 2019, 03:47 PM IST
ಗ್ಯಾಂಗ್ ರೇಪ್ ಸಂತ್ರಸ್ತೆ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಆದೇಶ title=

ನವದೆಹಲಿ: 2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಷ್ಟೇ ಅಲ್ಲದೆ, 2002ರಿಂದ ಸಂತ್ರಸ್ತ ಮಹಿಳೆ ಅಲೆಮಾರಿ ಜೀವನ ನಡೆಸುತ್ತಿದ್ದಾಳೆ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಾಸಿಸಲು ಮನೆಯನ್ನೂ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ. 

ಪ್ರಕರಣ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಾಧೀಶ ರಾಜನ್ ಗೊಗೊಯ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠಕ್ಕೆ ಮಾಹಿತಿ ನೀಡಿದ ಗುಜರಾತ್ ಸರ್ಕಾರ, ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಹಲವು ಅಧಿಕಾರಿಗಳ ಭತ್ಯೆಗಳನ್ನು ಕಡಿತಗೊಳಿಸಲಾಗಿದೆ. ಅಲ್ಲದೆ, ಓರ್ವ ಐಪಿಎಸ್ ಅಧಿಕಾರಿಗೆ ಎರಡು ಶ್ರೇಯಾಂಕಗಳ ಹಿಂಬಡ್ತಿ ನೀಡಲಾಗಿದೆ ಎಂದು ಹೇಳಿದೆ. 

2002ರ ಮಾರ್ಚ್ ನಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ಗಲಭೆಯ ಬಳಿಕ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗರ್ಭೀಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ಅಹಮದಾಬಾದ್ ಬಳಿಯ ರಾಧಿಕ್ ಪುರ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

ಈ ಹಿಂದೆ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬನೋಗೆ ಗುಜರಾತ್ ಸರ್ಕಾರ 5 ಲಕ್ಷ ರೂ. ನೀಡಲು ಮುಂದಾಗಿತ್ತು. ಆದರೆ ಬಿಲ್ಕಿಸ್ ಬನೊ ಇದನ್ನು ನಿರಾಕರಿಸಿದ್ದರು.

Trending News