ನವದೆಹಲಿ: ಮಾಧ್ಯಮದಲ್ಲಿನ ಅಶ್ಲೀಲ ಜಾಹೀರಾತುಗಳನ್ನು ನಿಗ್ರಹಿಸಲು ಕಠಿಣ ಕ್ರಮ ಅಗತ್ಯವಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ರಾಮ್ ಗೋಪಾಲ್ ಯಾದವ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾವಡೇಕರ್, ಈವರೆಗೆ 6,700ಕ್ಕೂ ಹೆಚ್ಚು ದೂರುಗಳನ್ನು ಸರ್ಕಾರ ನಿಭಾಯಿಸಿದ್ದರೂ, ಈ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಎಲ್ಲಾ ರೀತಿಯ ಮಾಧ್ಯಮಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ ಕುರಿತು ಚರ್ಚಿಸಿದ ಯಾದವ್, ಅಂತಹ ಜಾಹೀರಾತುಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು, ಈ ಅಶ್ಲೀಲತೆಯು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದರು.
ರಾಮ್ ಗೋಪಾಲ್ ಯಾದವ್ ಮಾತನಾಡಿ ದೇಶವು ನೈತಿಕ ಅಧಃಪತನದತ್ತ ಸಾಗುತ್ತಿದ್ದು, ಮಧ್ಯಪಾನ ಮತ್ತು ನಗ್ನತೆ ಏರಿಕೆ ಅಧಿಕವಾಗಿದೆ ಎಂದು ಹೇಳಿದರು. ಇನ್ನೊಂದೆಡೆಗೆ ಜಯಾ ಬಚ್ಚನ್ ಮಾತನಾಡಿ ಸಂಸತ್ತಿನಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಹಾಗೂ ಲಿಂಗ ಅಸಮಾನತೆ ಅಧಿಕವಾಗಿದೆ ಎಂದು ಹೇಳಿದರು.