ಕಡಪದಲ್ಲಿ ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಹತ್ಯೆ; ಎಸ್ಐಟಿ ತನಿಖೆಗೆ ಆದೇಶ

ಹಿರಿಯ ಐಪಿಎಸ್ ಅಧಿಕಾರಿ ಅಮಿತ್ ಗರ್ಗ್ ನೇತೃತ್ವದಲ್ಲಿ ಎಸ್​ಐಟಿ ತಂಡವನ್ನು ರಚಿಸಿ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿರುವ ಸಿಎಂ, ತ್ವರಿತವಾಗಿ ತನಿಖೆ ನಡೆಸಿ ಶೀಘ್ರದಲ್ಲಿಯೇ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

Last Updated : Mar 15, 2019, 07:11 PM IST
ಕಡಪದಲ್ಲಿ ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಹತ್ಯೆ; ಎಸ್ಐಟಿ ತನಿಖೆಗೆ ಆದೇಶ title=

ಕಡಪ: ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವೈ.ಎಸ್. ವಿವೇಕಾನಂದ ರೆಡ್ಡಿ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು, ಸಾವಿನ ಬಗ್ಗೆ ಎಸ್ಐಟಿ ತನಿಖೆಗೆ ಆದೇಶಿಸಿದ್ದಾರೆ. 

ಹಿರಿಯ ಐಪಿಎಸ್ ಅಧಿಕಾರಿ ಅಮಿತ್ ಗರ್ಗ್ ನೇತೃತ್ವದಲ್ಲಿ ಎಸ್​ಐಟಿ ತಂಡವನ್ನು ರಚಿಸಿ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿರುವ ಸಿಎಂ, ತ್ವರಿತವಾಗಿ ತನಿಖೆ ನಡೆಸಿ ಶೀಘ್ರದಲ್ಲಿಯೇ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಗುರುವಾರ ಜಮ್ಮಲಮಡುಗು, ಚಪಡು ಮುಂತಾದೆಡೆ ಚುನಾವಣಾ ಪ್ರಚಾರ ನಡೆಸಿದ್ದ ವಿವೇಕಾನಂದ ರೆಡ್ಡಿ ಅವರು ರಾತ್ರಿ 11.30ರವರೆಗೆ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಬಳಿಕ ಮನೆಗೆ ತೆರಳಿದ್ದರು. ಆದರೆ ಬೆಳಿಗ್ಗೆ ಹೊತ್ತಿಗೆ ಮೃತಪಟ್ಟಿರುವುದು ಕಂಡುಬಂದಿತ್ತು. ವಿವೇಕಾನಂದರ ಮಲಗುವ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿತ್ತಲ್ಲದೆ ಕೈ ಮತ್ತು ತಲೆಯಲ್ಲಿ ಗಾಯವಾಗಿರುವುದು ಸ್ಪಷ್ಟವಾಗಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿವೇಕಾನಂದ ರೆಡ್ಡಿ ಅವರ ಸೋದರಳಿಯ ಎಂ.ವಿ.ಕೃಷ್ಣ ರೆಡ್ಡಿ ಸಹಜ ಸಾವಲ್ಲ, ಕೊಲೆ ಎಂಬ ಶಂಕೆ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.  

ಇದೇ ವೇಳೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಹಜ ಸಾವಲ್ಲ, ಕೊಲೆ ಎಂಬುದು ತಿಳಿದುಬಂದಿದ್ದು, ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯ ಅವಧಿಯಲ್ಲಿ ಈ ಹತ್ಯೆ ನಡೆದಿರಬಹುದೆಂದು ಫೋರೆನ್ಸಿಕ್ ವರದಿಯಿಂದ ಬಹಿರಂಗವಾಗಿದೆ. ಹೀಗಾಗಿ ವಿವೇಕಾನಂದ ಅವರನ್ನು ಹತ್ಯೆಗೈದಿರುವುದು ಖಚಿತವಾದ ಬೆನ್ನಲ್ಲೇ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದ್ದಾರೆ.

1999 ಮತ್ತು 2004ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಕಡಪ ಲೋಕಸಭಾ ಕ್ಷೇತ್ರದಿಂದ ವೈ.ಎಸ್.ವಿವೇಕಾನಂದ ರೆಡ್ಡಿ ಚುನಾಯಿತರಾಗಿದ್ದರು. ಅಲ್ಲದೆ, ಆಂಧ್ರಪ್ರದೇಶ ವಿಧಾನಸಭೆಗೆ ಪುಲಿವೆಂದುಲ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿದ್ದರು.  2009ರಲ್ಲಿ ಆಂಧ್ರಪ್ರದೇಶ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ವಿವೇಕಾನಂದ ರೆಡ್ಡಿ, ಕಿರಣ್ ಕುಮಾರ್ ರೆಡ್ಡಿ ಕ್ಯಾಬಿನೆಟ್ ನಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Trending News