ಮುಂಬೈ: ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಚುನಾವಣಾ ಆಯೋಗವೇ ನೇರ ಹೊಣೆ ಎಂದು ಶಿವಸೇನಾ ಪಕ್ಷ ತಿಳಿಸಿದೆ. ಇವಿಎಮ್ ಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಶಿವಸೇನೆಯ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಚುನಾವಣೆ ನಡೆಸಲು ಮತದಾನ ಪತ್ರಗಳನ್ನು ಬಳಸಬೇಕೆಂದು ಕರೆ ನೀಡಿದ್ದಾರೆ.
ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿನ ತಾಂತ್ರಿಕ ಸಮಸ್ಯೆಗಳು ಸ್ಪಷ್ಟವಾಗಿ ಚುನಾವಣಾ ಆಯೋಗದ ವೈಫಲ್ಯವನ್ನು ಸೂಚಿಸುತ್ತವೆ. ಉಪಚುನಾವಣೆಯಲ್ಲಿ ಈ ಪರಿಸ್ಥಿತಿ ಇದ್ದರೆ ಇನ್ನು ಮುಂಬರುವ ಲೋಕಸಭಾ ಚುನಾವಣೆಗಳ ಬಗ್ಗೆ ಯೋಚಿಸಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಎನ್ಸಿಪಿ ನಾಯಕ ಪ್ರಪುಲ್ ಪಟೇಲ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಕುರಿತಾಗಿ ಮಾತನಾಡಿದ ಅವರು "ಅನೇಕ ದೊಡ್ಡ ಯುರೋಪಿಯನ್ ರಾಷ್ಟ್ರಗಳಲ್ಲಿ ಚುನಾವಣಾ ಆಯೋಗಗಳು ಇವಿಎಂಗಳನ್ನು ತಿರಸ್ಕರಿಸಿದ್ದು, ಮತ್ತೆ ಮತಪತ್ರದ ಚುನಾವಣಾ ಪದ್ಧತಿ ಮರಳಿವೆ ಎಂದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನನಗೆ ಕರೆ ಮಾಡಿ 300 ಇವಿಎಂಗಳು ಕೈರಾನಾದಲ್ಲಿ ಕಾರ್ಯನಿರ್ಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಈಗಾಗಲೇ ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ 11 ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎನ್ನಲಾಗಿದೆ.