ನವದೆಹಲಿ: ಉತ್ತರ ಪ್ರದೇಶದ ಬಾರ್ ಕೌನ್ಸಿಲ್ ಅಧ್ಯಕ್ಷೆ ದರ್ವೇಶ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಇಂದೂ ಕೌಲ್ ಅವರು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದರ್ವೇಶ್ ಯಾದವ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ದೇಶಾದ್ಯಂತ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರಿಗೆ ಸಾಕಷ್ಟು ಭದ್ರತೆ ಒದಗಿಸಬೇಕು ಎಂದು ಇಂದೂ ಕೌಲ್ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಆದರೆ, ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ರಜಾ ಪೀಠ ಸಿಬಿಐನಿಂದ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ದೇಶಾದ್ಯಂತ ಮಹಿಳಾ ವಕೀಲರ ಸುರಕ್ಷತೆಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.
ಉತ್ತರ ಪ್ರದೇಶ ಬಾರ್ ಕೌನ್ಸಿಲ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರ್ವೇಶ್ ಯಾದವ್ ಅವರನ್ನು, ಚುನಾವಣೆಯ ಎರಡು ದಿನಗಳ ಬಳಿಕ, ಜೂನ್ 12 ರಂದು ಆಗ್ರಾ ಸಿವಿಲ್ ಕೋರ್ಟ್ ಆವರಣದಲ್ಲಿ ಸಹೋದ್ಯೋಗಿಯೇ ಗುಂಡಿಟ್ಟು ಹತ್ಯೆ ಮಾಡಿದ್ದರು.
ಅರ್ಜಿಯಲ್ಲಿ, ದರ್ವೇಶ್ ಯಾದವ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲದೆ, ದೆಹಲಿ ಸರ್ಕಾರವು ಮಂಜೂರು ಮಾಡಿದ 50 ಲಕ್ಷ ರೂ.ಗಳ ಬಳಕೆಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ದೆಹಲಿ ಬಾರ್ ಕೌನ್ಸಿಲ್ಗೆ ನಿರ್ದೇಶನಗಳನ್ನು ನೀಡಬೇಕು ಮತ್ತು ದರ್ವೇಶ್ ಕೊಲೆ ಪ್ರಕರಣದ ಪ್ರಗತಿ ವರದಿಯನ್ನು ನೀಡಬೇಕೆಂದು ಒತ್ತಾಯಿಸಲಾಗಿತ್ತು.