ನವದೆಹಲಿ: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಹಿಂದೂ ಮತ್ತು ಮುಸ್ಲಿಂ ಪಕ್ಷಗಳಿಗೆ ಅಕ್ಟೋಬರ್ 18 ರೊಳಗೆ ಎಲ್ಲಾ ವಾದಗಳನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿದ್ದಾರೆ.
ಅಕ್ಟೋಬರ್ 18ರೊಳಗೆ ವಾದಗಳು ಮುಕ್ತಾಯವಾಗದಿದ್ದಲ್ಲಿ, ಸಮಯದ ಚೌಕಟ್ಟಿನಲ್ಲಿ ತೀರ್ಪು ನೀಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಅವರು ನವೆಂಬರ್ 17ಕ್ಕೆ ನಿವೃತ್ತಿ ಹೊಂದಲಿರುವ ಕಾರಣ ವಾದಗಳನ್ನು ಪೂರ್ಣಗೊಳಿಸುವ ದಿನಾಂಕ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾರಗಳಲ್ಲಿ ತೀರ್ಪು ನೀಡುವುದು ನಿಜಕ್ಕೂ ಪವಾಡ ಎಂದು ಸಿಐಜೆ ಹೇಳಿದ್ದಾರೆ.
ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖರಾ ಎಂಬ ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಭಜಿಸಬೇಕೆಂದು 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ನಾಲ್ಕು ಸಿವಿಲ್ ಮೊಕದ್ದಮೆಗಳಲ್ಲಿ ಹದಿನಾಲ್ಕು ಮೇಲ್ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ದೈನಂದಿನ ವಿಚಾರಣೆಗಳನ್ನು ನಡೆಸುತ್ತಿದೆ.