ನವದೆಹಲಿ: ರತನ್ ಟಾಟಾ ಮತ್ತು ಟಾಟಾ ಸನ್ಸ್ ಅವರಿಗೆ ಸುಪ್ರೀಂ ಕೋರ್ಟ್ ನಿಂದ ದೊಡ್ಡ ಪರಿಹಾರ ಸಿಕ್ಕಿದೆ. ಟಾಟಾ ಸನ್ಸ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಎನ್ಸಿಎಲ್ಎಟಿ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಸೈರಸ್ ಮಿಸ್ತ್ರಿ ಅವರಿಗೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಬಿ.ಆರ್.ಗವೈ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ NCLAT ತೀರ್ಮಾನವನ್ನು ಪ್ರಶ್ನಿಸಿ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಒಪ್ಪಿ ಮಿಸ್ತ್ರಿ ಮತ್ತು ಇತರರಿಗೆ ಇಂದು ನೊಟೀಸ್ ಜಾರಿಗೊಳಿಸಿದೆ.
ವಾಸ್ತವವಾಗಿ, ಟಾಟಾ ಸನ್ಸ್ ಮಂಡಳಿಯ 2016 ರ ನಿರ್ಧಾರವನ್ನು NCLAT ರದ್ದುಗೊಳಿಸಿತು, ಈ ವೇಳೆ ಮಿಸ್ತ್ರಿ ಅವರನ್ನು ತೆಗೆದುಹಾಕಲಾಯಿತು. ಮಿಸ್ತ್ರಿ ಹಿಂದೆ ಸರಿದ ನಂತರ ರತನ್ ಟಾಟಾ ಹಂಗಾಮಿ ಅಧ್ಯಕ್ಷರಾದರು.
ಸೈರಸ್ ಮಿಸ್ತ್ರಿ ಅವರನ್ನು ದೇಶದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಸಂಘ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಡಿಸೆಂಬರ್ 18 ರಂದು ನ್ಯಾಷನಲ್ ಕಂಪನಿ ಲಾ ಅಪೀಲೆಟ್ ಟ್ರಿಬ್ಯೂನಲ್ (ಎನ್ಸಿಎಲ್ಎಟಿ) ಪುನಃ ನೇಮಿಸಿತು. ಟಾಟಾ ಗ್ರೂಪ್ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಿಸಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ (ಎನ್ಸಿಎಲ್ಎಟಿ) ಆದೇಶವನ್ನು ಪ್ರಶ್ನಿಸಿ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ (ಟಿಎಸ್ಪಿಎಲ್) ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಈ ಅರ್ಜಿಯಲ್ಲಿ ಎನ್ಸಿಎಲ್ಎಟಿಯ ಡಿಸೆಂಬರ್ 18 ರ ನಿರ್ಧಾರವನ್ನು ಟಿಎಸ್ಪಿಎಲ್ ಪ್ರಶ್ನಿಸಿತು. ಅಲ್ಲದೆ ಈ ಆದೇಶವು ಕಾರ್ಪೊರೇಟ್ ಪ್ರಜಾಪ್ರಭುತ್ವ ಮತ್ತು ನಿರ್ದೇಶಕರ ಮಂಡಳಿಯ ಹಕ್ಕುಗಳನ್ನು ಸಹ ಹಾಳು ಮಾಡುತ್ತದೆ ಎಂದು ಟಾಟಾ ಸನ್ಸ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು.
ಇಂದು ಟಾಟಾ ಸನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎನ್ಸಿಎಲ್ಎಟಿ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದ್ದು, ಸೈರಸ್ ಮಿಸ್ತ್ರಿ ಸೇರಿದಂತೆ ಇತರರಿಗೆ ಅವರಿಗೆ ನೋಟಿಸ್ ನೀಡಿದೆ. ಇದರಿಂದಾಗಿ ರತನ್ ಟಾಟಾ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.