ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವದ್ರಾ ಸೋಮವಾರ ಉತ್ತರ ಪ್ರದೇಶದ ಬುಂದೇಲ್ಖಂಡದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಆ ಸಂದರ್ಭದಲ್ಲಿ 'ನಾನು ಯಾವುದೇ ಪವಾಡ ಮಾಡಲು ಸಾಧ್ಯವಿಲ್ಲ. ಬದಲಿಗೆ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಲಪಡಿಸುವ ಅಗತ್ಯವಿದೆ' ಎಂದು ಅವರು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಿಯಾಂಕ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ನ ವಾರ್ ರೂಂ ಎಂದು ಕರೆಯಲ್ಪಡುವ ನಂ. 15 ಗುರುದ್ವಾರ ರಾಕಬ್ಗಂಜ್ ನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಬುಂದೇಲ್ಖಂಡ್ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಪ್ರಿಯಾಂಕ ಪಕ್ಷದ ಸಂಘಟನೆ ಬಗ್ಗೆ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ನೀಡಿದ ಮಾಹಿತಿ ಪ್ರಕಾರ, "ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕು. ನಾವು ಮೇಲಿಂದ ಯಾವುದೇ ಚಮತ್ಕಾರವನ್ನು ಮಾಡಲು ಸಾಧ್ಯವಿಲ್ಲ. ಪಕ್ಷದ ಗೆಲುವಿಗಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಪ್ರಿಯಾಂಕ ಹೇಳಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಿಯಾಂಕ ಸ್ಪಷ್ಟಪಡಿಸಿರುವುದಾಗಿ ಅವರು ಹೇಳಿದರು.
ಸಭೆಯಲ್ಲಿ ಕೆಲವು ನಾಯಕರು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪ್ರತಿಮೆಯನ್ನು ಪ್ರಿಯಾಂಕ ಅವರಿಗೆ ನೀಡಿದ್ದು, "ನಾವು ಪ್ರಿಯಾಂಕ ಅವರಿಗೆ ಝಾನ್ಸಿ ಪ್ರತಿಮೆಯನ್ನು ನೀಡಿದ್ದೇವೆ, ಅದರಿಂದ ಅವರು ರಾಣಿ ಲಕ್ಷ್ಮಿಬಾಯಿಯವರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾರೆ" ಎಂದಿದ್ದಾರೆ.
ಗಮನಾರ್ಹವಾಗಿ, ಜನವರಿ 23 ರಂದು, ಪ್ರಿಯಾಂಕಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಪೂರ್ವ ಉತ್ತರ ಪ್ರದೇಶ) ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಶ್ಚಿಮದ ಉತ್ತರ ಪ್ರದೇಶಕ್ಕೆ ಸಾಮಾನ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರು.