ಮಾಲಿನ್ಯವು ಜನರ ಉಸಿರುಗಟ್ಟಿಸುತ್ತಿದೆ: ಕೇಂದ್ರ, ದಿಲ್ಲಿ ಸರ್ಕಾರದ ವಿರುದ್ಧ ಸುಪ್ರೀಂ ಅಕ್ರೋಶ

ದೆಹಲಿಯ ಭೀಕರ ಮಾಲಿನ್ಯ ಮತ್ತು ನವೆಂಬರ್ 4 ರಂದು ವಾಹನಗಳಿಗೆ ಆಡ್-ಈವ್ ಸೂತ್ರದ ನಡುವೆ, ಸುಪ್ರೀಂ ಕೋರ್ಟ್ ಮಾಲಿನ್ಯವು ಜನರನ್ನು ಉಸಿರುಗಟ್ಟಿಸುತ್ತಿದೆ ಎಂಬ ಒಂದು ಮಹತ್ವದ ಪ್ರತಿಕ್ರಿಯೆಯನ್ನು ನೀಡಿದೆ.

Last Updated : Nov 4, 2019, 06:02 PM IST
ಮಾಲಿನ್ಯವು ಜನರ ಉಸಿರುಗಟ್ಟಿಸುತ್ತಿದೆ: ಕೇಂದ್ರ, ದಿಲ್ಲಿ ಸರ್ಕಾರದ ವಿರುದ್ಧ ಸುಪ್ರೀಂ ಅಕ್ರೋಶ title=

ನವದೆಹಲಿ: ದೆಹಲಿಯ ವಿಷಕಾರಿ ಮಾಲಿನ್ಯ ಮತ್ತು ನವೆಂಬರ್ 4 ರಿಂದ ದೆಹಲಿಯಲ್ಲಿ ಜಾರಿಗೆ ತರಲಾಗಿರುವ  ಆಡ್-ಈವನ್ ಸೂತ್ರದ ನಡುವೆ, 'ಮಾಲಿನ್ಯವು ಜನರನ್ನು ಉಸಿರುಗಟ್ಟಿಸುತ್ತಿದೆ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. 

ಮಾಲಿನ್ಯದಿಂದ ಮನೆಗಳಲ್ಲೂ ಉತ್ತಮ ಗಾಳಿ ಲಭಿಸುತ್ತಿಲ್ಲ. ನಾವು ಈ ರೀತಿ ಬದುಕಬಹುದೇ? ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್, ಉಭಯ ಸರ್ಕಾರಗಳು ಪರಸ್ಪರ ದೂಷಿಸುವಲ್ಲಿ ನಿರತವಾಗಿವೆಯೇ ಹೊರತು ಈ ಬಗ್ಗೆ  ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು  ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ಉಸಿರುಗಟ್ಟುವ ವಾತಾವರಣ ಮನೆ ಮಾಡಿದೆ. ಪ್ರತಿ ವರ್ಷವೂ ಇದೇ ಪರಿಸ್ಥಿತಿ ಇರುತ್ತದೆ. ಆದಾಗ್ಯೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.  ಸುಸಂಸ್ಕೃತ ದೇಶಗಳಲ್ಲಿ ಈ ರೀತಿ ಇರಲು ಸಾಧ್ಯವೇ ಎಂದು ಬೇಸರ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯ, 'ಬದುಕುವ ಹಕ್ಕು ಅತ್ಯಂತ ಮುಖ್ಯ. ಈ ರೀತಿಯ ವಾತಾವರಣದಲ್ಲಿ ಬದುಕುವುದು ನಿಜಕ್ಕೂ ಅಸಹನೀಯ. ಈ ಕಾರಣದಿಂದಾಗಿ ನಾವು ನಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದೇವೆ' ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರದ ಗಮನ ಸೆಳೆದಿದೆ.

ದೆಹಲಿ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ರೈತರು ಕೂಳೆ ಸುಡುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರಗಳು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂಬಂಧ ನ್ಯಾಯಾಲಯವು ಹರಿಯಾಣ ಮತ್ತು ಪಂಜಾಬ್ ಸರ್ಕಾರವನ್ನು ಖಂಡಿಸಿತು. ವಾಯುಮಾಲಿನ್ಯಕ್ಕೆ ಕಾರಣವಾಗುವ ಈ ಅಂಶಗಳ ಕುರಿತು ಆಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅಧಿಕಾರಿಗಳ ಜೊತೆಗೆ ಗ್ರಾಮದ ಮುಖ್ಯಸ್ಥರ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದರೊಂದಿಗೆ, ತಜ್ಞರನ್ನು ಅರ್ಧ ಘಂಟೆಯಲ್ಲಿ ಕರೆ ಮಾಡಿ ಎಂದು ನ್ಯಾಯಾಲಯ ಹೇಳಿದೆ. ಐಐಟಿಯ ತಜ್ಞರಲ್ಲದೆ, ಸಚಿವಾಲಯದ ಯಾರನ್ನಾದರೂ ಆಹ್ವಾನಿಸಿ, ಮಾಲಿನ್ಯವನ್ನು ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಈ ಸಮಯದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಕೂಳೆ ಸುಡುವುದರಿಂದ ಈ ರೀತಿ ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಸರ್ಕಾರದ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ರೈತರು ತಮ್ಮ ಜೀವನೋಪಾಯಕ್ಕಾಗಿ ಇತರರನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದೆ. ಯಾವುದೇ ರೈತರು ಕೂಳೆ ಸುಡುವುದನ್ನು ಮುಂದುವರಿಸಿದರೆ ಅಂತಹ ಜನರ ಬಗ್ಗೆ ನಮಗೆ ಸಹಾನುಭೂತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಸರ್ಕಾರಗಳು ರೈತರಿಗೆ ಇತರೆ ಮಾರ್ಗವನ್ನು ಸೂಚಿಸಬೇಕು ಎಂದು ನಿರ್ದೇಶನ ನೀಡಿದೆ.
 

Trending News