ನವದೆಹಲಿ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಸ್ಮರಣಾರ್ಥ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಇಂಡಿಯಾ ಗೇಟ್ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕದಲ್ಲಿ ನಾಲ್ಕು ಕೇಂದ್ರಿತ ವಲಯಗಲಿದ್ದು, ಪುರಾತನ ಚಕ್ರವ್ಯೂಹ ಯುದ್ಧ ತಂತ್ರಗಾರಿಕೆಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯ ಬಂದ ನಂತರ ಹುತಾತ್ಮರಾದ 25,000 ಕ್ಕೂ ಹೆಚ್ಚು ಯೋಧರ ಹೆಸರುಗಳನ್ನು ಯುದ್ಧ ಸ್ಮಾರಕದ ಗೋಡೆಗಳ ಮೇಲೆ ಕೆತ್ತಲಾಗಿದೆ. ಇಲ್ಲಿ ರಾಷ್ಟ್ರ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಲಿದಾನ ನೀಡಿದ ನಮ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನತೆಗೆ ಅವಕಾಶ ಸಿಗಲಿದೆ ಎಂದು ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಯೋಧರ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ದೇಶದಲ್ಲಿ ಇದುವರೆಗೂ ಯುದ್ಧ ಸ್ಮಾರಕಗಳಿರಲಿಲ್ಲ. ಹಾಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಬೇಕು ಎಂದು ದಶಕಗಳಿಂದ ಒತ್ತಾಯಿಸಲಾಗುತ್ತಿತ್ತು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂಧ ನಂತರ ಸಚಿವ ಸಂಪುಟ ಸಭೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಬ್ರಿಟಿಷರ ಆಡಳಿತವಿದ್ದಾಗ ಮೊದಲ ಮಹಾಯುದ್ಧ (1914-1918) ಮತ್ತು 1919ರಲ್ಲಿ ನಡೆದ ಮೂರನೇ ಆಂಗ್ಲೋ-ಆಫ್ಘನ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಇಂಡಿಯಾ ಗೇಟ್ ನಿರ್ಮಿಸಲಾಗಿತ್ತು. ಇಲ್ಲಿ ಈ ಯುದ್ಧಗಳಲ್ಲಿ ಹುತಾತ್ಮರಾದ ಸುಮಾರು 13000 ಯೋಧರ ಹೆಸರುಗಳನ್ನು ಕೆತ್ತಲಾಗಿದೆ.