ಮುಂಬೈ ಬೆಂಕಿ ಅವಘಡ: ಅಗ್ನಿಶಾಮಕ ವಾಹನಗಳಿಗೆ ತಡೆಯಾಯ್ತು ಅಕ್ರಮ ಪಾರ್ಕಿಂಗ್

ಮಹಾರಾಷ್ಟ್ರ ಹೌಸಿಂಗ್ ಅಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ(ಎಂಎಚ್ಎಡಿಎ) ಈ ಘಟನೆಯ ಕುರಿತು ತನಿಖೆ ನಡೆಸೆ, ವರದಿ ಸಲ್ಲಿಸಲು ಚೆಂಬೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರಿಗೆ ಸೂಚನೆ ನೀಡಿದೆ. 

Last Updated : Dec 30, 2018, 05:44 PM IST
ಮುಂಬೈ ಬೆಂಕಿ ಅವಘಡ: ಅಗ್ನಿಶಾಮಕ ವಾಹನಗಳಿಗೆ ತಡೆಯಾಯ್ತು ಅಕ್ರಮ ಪಾರ್ಕಿಂಗ್ title=
Pic courtesy: DNA

ಮುಂಬೈ: ನಗರದ ಪ್ರಸಿದ್ಧ ರೆಸಿಡೆನ್ಷಿಯಲ್ ಏರಿಯಾ ಸರ್ಗಂ ಸೊಸೈಟಿಯಲ್ಲಿ 148 ಫ್ಲಾಟ್ ಗಳಿವೆ. ಆದರೆ ತೆರೆದ ಪಾರ್ಕಿಂಗ್ ಪ್ರದೇಶ ಸೇರಿದಂತೆ ಕೇವಲ 60 ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಹೀಗಾಗಿ ನಿವಾಸಿಗಳು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಸ್ಥಳವಿಲ್ಲದೆ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದು ತುರ್ತು ಚಿಕಿತ್ಸಾ ವಾಹನಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. 

ಗುರುವಾರ ರಾತ್ರಿ ಈ ಮುಂಬೈ ಕಟ್ಟಡದ 14ನೇ ಅಂತಸ್ತಿನಲ್ಲಿ ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ನಡೆದದ್ದೂ ಇದೇ...ಈ ಘಟನೆಯಲ್ಲಿ 35 ಮಂದಿ ಗಾಯಗೊಂಡರಲ್ಲದೆ ಐವರು ಸಾವನ್ನಪ್ಪಿದ್ದರು.

ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳದವರು ಅನಾಹುತ ತಪ್ಪಿಸಲು ಆದಷ್ಟು ಬೀಗ ಸ್ಥಳಕ್ಕೆ ಆಗಮಿಸಿದರಾದರೂ, ಅಗ್ನಿಶಾಮಕ ವಾಹನಗಳನ್ನು ಕಟ್ಟಡದ ಆವರಣದೊಳಗೆ ತೆಗದುಕೊಂಡು ಹೋಗಲು ಸಾಧ್ಯವಾಗದ ಕಾರಣ 14 ಮಹಡಿಗಳನ್ನು ತಾವೇ ಹತ್ತಿ ರಕ್ಷಣಾ ಕಾರ್ಯ ನಡೆಸಬೇಕಾಯಿತು. ಇದು ರಕ್ಷಣಾ ಕಾರ್ಯ ವಿಳಂಬಕ್ಕೂ ಕಾರಣವಾಯಿತು. ಇದಕ್ಕೆ ಮುಖ್ಯ ಕಾರಣ ವಾಹನಗಳ ಅವ್ಯವಸ್ಥಿತ ಪಾರ್ಕಿಂಗ್... ಹೌದು, ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದರಿಂದ ಸೊಸೈಟಿ ಆವರಣ ಪೂರ್ತಿ ಕಾರುಗಳು ಮತ್ತು ದ್ವಿಚಕ್ರವಾಹನಗಳನ್ನು ನಿಲ್ಲಿಸಿದ್ದರಿಂದ ಅಗ್ನಿಶಾಮಕ ದಳದವರು ಕಟ್ಟಡ ಪ್ರವೇಶಿಸುವುದು ಕಷ್ಟವಾಯಿತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚೆಂಬೂರ್ ಅಗ್ನಿಶಾಮಕ ಅಧಿಕಾರಿ ಪಿ.ಜಿ.ದುಡ್ಹಾಲ್, "ಬೆಂಕಿ ಅವಘಡ ನಡೆದ ದಿನ ಅಪಾರ್ಟ್ಮೆಂಟ್ ಪ್ರವೇಶದ್ವಾರದ ವರೆಗೂ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಬಳಿಕ ನಿವಾಸಿಗಳು ಬಂದು ವಾಹನಗಳನ್ನು ತೆಗೆಯಲು ಆರಂಭಿಸಿದರು. ಅಲ್ಲಲ್ಲಿ ನಿಲ್ಲಿಸಿದ್ದ ಇತರ ವಾಹನಗಳನ್ನೂ ಪಾದಚಾರಿ ಮಾರ್ಗಕ್ಕೆ ಎಳೆದು ನಿಲ್ಲಿಸಿ, ಅಗ್ನಿಶಾಮಕ ವಾಹನ ಒಳಗೆ ಹೋಗಲು ದಾರಿ ಮಾಡಿಕೊಟ್ಟರು" ಎಂದಿದ್ದಾರೆ. 

ಬೆಂಕಿ ಅವಘಡದಿಂದ ಆಗುವ ಅನಾಹುತವನ್ನು ತಪ್ಪಿಸಲು ಅಗ್ನಿಶಾಮ ದಳದವರು ಆದಷ್ಟು ಬೇಗ ಸ್ಥಳಕ್ಕೆ ಧಾವಿಸಿದರಾದರೂ ಅಕ್ರಮವಾಗಿ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಅಗ್ನಿ ನಿಂದಿಸುವ ಪ್ರಯತ್ನಕ್ಕೆ ತಡೆಯಾಯಿತು. ಅಲ್ಲದೆ ಅಗ್ನಿ ಸುರಕ್ಷತೆ ಕ್ರಮಗಳನ್ನೂ ಉಲ್ಲಂಘಿಸಿ ವಿದ್ಯುತ್ ಮೀಟರ್ ಬಾಕ್ಸ್ ಗಳಿಗೆ ತಗಲುವಂತೆಯೇ ಕಾರುಗಳನ್ನು ಪಾರ್ಕ್ ಮಾಡಲಾಗಿತ್ತು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿವಾಸಿ ನಿಲೇನ್ ಜೋಷಿ, "ಎಲೆಕ್ಟ್ರಿಕ್ ಮೀಟರ್ ಬಾಕ್ಸ್ ಬಳಿಯ ಸ್ವಲ್ಪ ಜಾಗವನ್ನು ಪಾರ್ಕಿಂಗ್ ಸ್ಥಳ ಎಂದು ಮಾರಾಟ ಮಾಡಲಾಗಿದೆ. 2008ರಲ್ಲಿ ಈ ಪ್ರದೇಶದಲ್ಲಿ ಒಂದು ಚಿಕ್ಕ ಉದ್ಯಾನವನವೂ ಇತ್ತು. ಆದರೀಗ ಆ ಸ್ಥಳದಲ್ಲಿ 15 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ" ಎಂದು ಹೇಳಿದ್ದಾರೆ. 

ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿರುವ ಅಗ್ನಿಶಾಮಕ ವ್ಯವಸ್ಥೆಯು ಮೀಸಲಿಟ್ಟ ನೀರಿನ ಟ್ಯಾಂಕಿಗೆ ನೇರ ಸಂಪರ್ಕ ಹೊಂದಿಲ್ಲ. "ನಾವೆಲ್ಲರೂ ಪ್ರತ್ಯೇಕವಾಗಿ ಸ್ವಂತ ಖರ್ಚಿನಲ್ಲಿ ಪ್ರತಿ ಫ್ಲಾಟ್ ಹೊರಗೆ ಅಗ್ನಿಶಾಮಕ ಸಿಲಿಂಡರ್ ಅಳವಡಿಸಿಕೊಂಡಿದ್ದೇವೆ" ಎನ್ನುತಾರೆ ಮತ್ತೊಬ್ಬ ನಿವಾಸಿ ಶಂಕರ್ ಲಂಕೆ. ಇದಕ್ಕೆ ಪೂರಕವಾಗುವಂತೆ ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ನೀರಿನ ಅಭಾವ ಎದುರಾದ್ದರಿಂದ ಬೆಂಕಿ ನಂದಿಸುವುದು ಕಷ್ಟವಾಯಿತು. ಹಾಗಾಗಿ ಮೊದಲು ನೀರಿನ ಟ್ಯಾಂಕ್ ಗಳಿಗೆ ಕೊಳವೆ ಸಂಪರ್ಕ ಕಲ್ಪಿಸಿ, ಬಳಿಕ ಬೆಂಕಿ ನಂದಿಸಲು 14ನೇ ಮಹಡಿಗೆ ಹತ್ತಿ ಹೋಗಬೇಕಾಯಿತು ಎಂದು ಅಗ್ನಿಶಾಮಕ ಅಧಿಕಾರಿ ಪಿ.ಜಿ.ದುಡ್ಹಾಲ್ ವಿವರಿಸಿದ್ದಾರೆ.

ಏತನ್ಮಧ್ಯೆ, ವಸತಿ ಸಂಕೀರ್ಣದಲ್ಲಿ ಸುರಕ್ಷತೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಕಾರಣ ಅಭಿವೃದ್ಧಿ ಸಂಸ್ಥೆ ರಿಲಯನ್ಸ್ ರಿಯಾಲ್ಟರ್'ನ ಮೂವರು ಪಾಲುದಾರರಾದ ಹೇಮೇಂದ್ರ ಮಾಪಾರ, ಸುಭಾಕ್ ಮಾಪಾರ ಮತ್ತು ಕೊಠಾರಿ ಎಂಬುವವರ ವಿರುದ್ಧ ತಿಲಕ್ ನಗರ್ ಪೊಲೀಸರು ದೂರು ದಾಖಲಿಸಿದ್ದಾರೆ. 

BMC ಅಧಿಕಾರಿಗಳು ಹೇಳೋದೇನು?
BMC ಅಧಿಕಾರಿಗಳ ಪ್ರಕಾರ, 2014 ರಲ್ಲಿ 35 ನೆಯ ಕಟ್ಟಡ ನಿರ್ಮಾಣವನ್ನು ಸಂಸ್ಥೆ ಪೂರ್ಣಗೊಳಿಸಿದೆಯಾದರೂ ಇದುವರೆಗೆ ಬೆಂಕಿ ಸುರಕ್ಷತಾ ಘಟಕಗಳನ್ನು ಸ್ಥಾಪಿಸಿಲ್ಲ. ಇದಲ್ಲದೆ, 15 ನೇ ಮಹಡಿಯಲ್ಲಿನ ಆಶ್ರಯ ಪ್ರದೇಶವು ಮತ್ತೊಂದು ವಿಭಾಗಕ್ಕೆ ಸೇರಿದೆ. ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದಿದೆ. 

ಏತನ್ಮಧ್ಯೆ, ಮಹಾರಾಷ್ಟ್ರ ಹೌಸಿಂಗ್ ಅಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ(ಎಂಎಚ್ಎಡಿಎ) ಈ ಘಟನೆಯ ಕುರಿತು ತನಿಖೆ ನಡೆಸೆ, ವರದಿ ಸಲ್ಲಿಸಲು ಚೆಂಬೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರಿಗೆ ಸೂಚನೆ ನೀಡಿದೆ. "ನಮ್ಮ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಕಟ್ಟಡಕ್ಕೆ ಭೇಟಿ ನೀಡಿದ್ದರು. ಆದರೆ ಇದು ಇನ್ನೂ ಅಗ್ನಿಶಾಮಕ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿತ್ತು. ಕಟ್ಟಡದ ಉದ್ಯೋಗ ಪ್ರಮಾಣಪತ್ರ, ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತು ಎನ್ಒಸಿ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ಪರಿಶೀಲಿಸಿ, ಬಳಿಕ ಎಂಎಚ್ಎಡಿಎಯ ಮುಂಬಯಿ ಮಂಡಳಿಯ ಮುಖ್ಯ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು" ಎಂದು ಎಂಎಚ್ಎಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ದಿಲೀಪ್ ಗಾರ್ಜೆ ಹೇಳಿದ್ದಾರೆ.
 

Trending News