ನವದೆಹಲಿ: ಜೈಶ್–ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಒಪ್ಪಿಕೊಂಡಿದ್ದಾರೆ. ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಸಚಿವ ಖುರೇಷಿ 'ಮಸೂದ್ ಅಜ್ಹರ್ ಆರೋಗ್ಯ ಸರಿಯಿಲ್ಲ. ಆತ ತನ್ನ ಮನೆಯಲ್ಲೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ’ ಎಂಬ ಹೊಸ ರಾಗ ತೆಗೆದಿದ್ದಾರೆ.
ಇನ್ನು ಮೌಲಾನ ಮಸೂದ್ ಅಜ್ಹರ್ ನ ಜೈಶ್ ಎ ಮೊಹಮ್ಮದ್ ಸಂಘಟನೆ ಹಿಂಸಾಚಾರದಲ್ಲಿ ತೊಡಗಿರುವ ಬಗ್ಗೆ ಭಾರತ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ ಆತನನ್ನು ಬಂಧಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಸಿಎನ್ಎನ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಶಿ ಹೇಳಿದ್ದಾರೆ.
ಮೌಲಾನ ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಭಾರತ ಸೇರಿ ಬಲಿಷ್ಠ ರಾಷ್ಟ್ರಗಳು ಪಟ್ಟು ಹಿಡಿದಿವೆ. ಈ ವಿಚಾರಕ್ಕೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಲೇ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಸೂದ್ನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದವು. ಇದಕ್ಕೆ, ಚೀನಾ ಅಪಸ್ವರ ಎತ್ತಿತ್ತು. ಸರಿಯಾದ ಸಾಕ್ಷ್ಯ ಇಲ್ಲದ ಕಾರಣ ನಾವು ಇದಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿತ್ತು.