ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಗೋರಖ್ಪುರ್ ಹಾಗೂ ಫೂಲ್ಫುರದಲ್ಲಿ ಎಸ್ಪಿ ಭರ್ಜರಿ ಜಯ ಗಳಿಸಿದೆ. ಇದರಿಂದಾಗಿ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ತೀವ್ರ ಮುಜುಗರ ಉಂಟುಮಾಡಿದೆ.
1991 ರಿಂದ ಬಿಜೆಪಿ ನಿಯಂತ್ರಣದಲ್ಲಿದ್ದ ಗೋರಖ್ಪುರ್ ಕ್ಷೇತ್ರ ಈ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪಾಲಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರವೀಣ್ ಕುಮಾರ್ ನಿಶಾದ್ 21,881 ಮತಗಳ ಅಂತರದಿಂದ ಗೋರಖ್ಪುರದಲ್ಲಿ ಗೆಲುವು ಸಾಧಿಸಿದ್ದರೆ, ಫುಲ್ಪುರ್ ಲೋಕಸಭಾ ಕ್ಷೇತ್ರದಿಂದ ನಾಗೇಂದ್ರ ಪ್ರತಾಪ್ ಸಿಂಗ್ 59,613 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ತಮ್ಮ ಸ್ವಕ್ಷೇತ್ರದಲ್ಲೇ ಬಿಜೆಪಿ ಸೋಲನ್ನು ಕಂಡಿರುವುಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ಗೆ ಭಾರೀ ಮುಖಭಂಗವಾಗಿದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯನ್ನು ಕಡೆಗಣಿಸಿದ್ದೇ ಈ ಚುನಾವಣೆಯಲ್ಲಿ ಸೋಲಲು ಕಾರಣ. ಮುಂದೆ ಈ ಮೈತ್ರಿಯನ್ನು ಎದುರಿಸಲು ನಾವು ಹೊಸ ತಂತ್ರವನ್ನು ಹೆಣೆಯುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.