ನವದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿ ಎರಡನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ರಾಷ್ಟ್ರೀಯತೆ, ಹಿಂದೂವಾದ ಮತ್ತು ನವ ಭಾರತ ನಿರ್ಮಾಣದಂತಹ ಹಲವು ಸಿದ್ಧಾಂತಗಳ ಮೂಲಕ ಜನರ ಮನಗೆದ್ದು ಜನಾದೇಶವನ್ನು ಬಿಜೆಪಿ ತಮ್ಮದಾಗಿಸಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಲುಂಡು, ಕೇರಳದ ವಯನಾಡಿನಲ್ಲಿ ಜಯ ಸಾಧಿಸಿದ್ದರೂ, ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ 9 ನಾಯಕರು ಬಿಜೆಪಿ ಅಲೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ.
ದೇಶದಲ್ಲಿನ ಮೋದಿ ಅಲೆಯನ್ನು ಕಾಂಗ್ರೆಸ್ ಪಕ್ಷದ ದಿಗ್ಗಜರೂ ಸಹ ತಡೆಯಲು ಸಾಧ್ಯವಾಗದೆ ಹಿನ್ನಡೆ ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್, ಶೀಲಾ ದೀಕ್ಷಿತ್, ಭೂಪೇಂದ್ರ ಸಿಂಹ ಹುಡ್ದಾ, ಹರೀಶ್ ರಾವತ್, ನವಾಂ ಟುಕಿ, ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಒಂಬತ್ತು ನಾಯಕರು ಬಿಜೆಪಿ ಎದುರು ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ 3,63, 933 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ದಿಗ್ವಿಜಯಸಿಂಗ್ ಪರಾಭವಗೊಂಡಿದ್ದಾರೆ. ಸೋಣಿಪತ್ ಕ್ಷೇತ್ರದಲ್ಲಿ ಮಾಜಿ ಸಿಎಂ ಭೂಪೇಂದ್ರ ಸಿಂಹ, ನೈನಿತಾಲ್ ಕ್ಷೇತ್ರದಲ್ಲಿ ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್, ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಸಹ ಸೋಲು ಅನುಭವಿಸುವಂತಾಗಿದೆ.
52 ಸ್ಥಾನಗಳಿಗೆ ಸೀಮಿತವಾದ ಕಾಂಗ್ರೆಸ್
ಲೋಕಸಭಾ ಚುನಾವಣೆ 2019ರ ಪ್ರಸ್ತುತ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಜಯಗಳಿಸಿದೆ. 2014ರಲ್ಲಿ 44 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಕಳೆದ 5 ವರ್ಷಗಳಲ್ಲಿ ಕೇವಲ 8 ಹೆಚ್ಚುವರಿ ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಗಿದೆ. ಚುನಾವಣೆಯಲ್ಲಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ನಿರ್ಧರಿಸಿದ್ದಾರೆ. ಜನಾದೇಶವನ್ನು ನಾನು ಗೌರವಿಸುತ್ತೇನೆ. ಈ ದಿನ ಕಾಂಗ್ರೆಸ್ ಸೋಲಿಗೆ ಕಾರಣಗಳೇನು ಎಂದು ಹೇಳುವ ದಿನವಲ್ಲ. ಗೆಲುವು ಸಾಧಿಸಿರುವ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳು" ಎಂದಿದ್ದಾರೆ.
16 ರಾಜ್ಯಗಳಲ್ಲಿ ಏಕೈಕ ಸ್ಥಾನವನ್ನೂ ಗಳಿಸದ ಕಾಂಗ್ರೆಸ್
ಕೇರಳ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ 50 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 31 ಸ್ಥಾನಗಳನ್ನು ಗಳಿಸಿದೆ. ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 15 ಸ್ಥಾನಗಳ ಗೆಲುವು ಸಾಧಿಸಿದ್ದು, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ ಎಂಟು ಸ್ಥಾನಗಳನ್ನು ಪಡೆದಿದೆ. ಇದಲ್ಲದೆ, ಬಿಹಾರ, ಗೋವಾ, ಜಾರ್ಖಂಡ್, ಕರ್ನಾಟಕ, ಮಧ್ಯ ಪ್ರದೇಶ, ನಾಗಾಲ್ಯಾಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇಂದ್ರ ಪ್ರದೇಶ ಪುದುಚೇರಿ ಸೇರಿ 10 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದೊಂದು ಸ್ಥಾನ ಲಭಿಸಿದೆ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ಏಕೈಕ ಸ್ಥಾನವನ್ನೂ ಗಳಿಸಿಲ್ಲ.
ರಾಹುಲ್ ಗಾಂಧಿ ನೇತೃತ್ವದ ಬಗ್ಗೆ ಪ್ರಶ್ನೆಗಳ ಸುರಿಮಳೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸ್ಥಾನಗಳನ್ನು ಪಡೆದ ಬೆನ್ನಲ್ಲೇ, ರಾಹುಲ್ ನಾಯಕತ್ವದ ಬಗ್ಗೆ ಸಾಕಷ್ಟು ಮಂದಿ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ರಾಜಕೀಯಕ್ಕೆ ಯೋಗ್ಯರಲ್ಲ, ಅವರನ್ನು ಸೇವೆಯಿಂದ ನಿವೃತ್ತಿ ಗೊಳಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಭವಿಷ್ಯ ಕರಾಳವಾಗಲಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಈ ಬೆನ್ನಲ್ಲೇ ಇಂದು ಕಾಂಗ್ರೆಸ್ ಸಭೆ ನಡೆಸಿ, ಮುಂದಿನ ನಿರ್ಣಯಗಳ ಬಗ್ಗೆ ಇಂದು ಚರ್ಚೆ ನಡೆಸಲು ತೀರ್ಮಾನಿಸಿದೆ.