ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್ ) 2019 ಇಂದು(ಭಾನುವಾರ) ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ನಡೆಯಲಿದೆ.
ದೇಶಾದ್ಯಂತ 154 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೀಟ್ ಯುಜಿ 2019 ಪರೀಕ್ಷೆಯನ್ನು ಪೆನ್ ಹಾಗೂ ಪೇಪರ್ ಮೋಡ್‌ನಲ್ಲಿ ನಡೆಸುತ್ತಿದ್ದು, ಈ ಬಾರೀ ಸುಮಾರು 15,1900 ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಉಡುಪಿಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ 'ನೀಟ್' ಪರೀಕ್ಷೆ ನಡೆಯಲಿದೆ.
ಪ್ರವೇಶ ಪರೀಕ್ಷೆ ಅಭ್ಯರ್ಥಿಗಳು ಮರೆಯದೆ ಪ್ರವೇಶ ಪತ್ರಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ, ಜೊತೆಗೆ ಒಂದು ಪಾಸ್ಪೋರ್ಟ್ ಅಳತೆಯೇ, ಐಡಿ ಪ್ರೂಫ್ ಬಹಳ ಅಗತ್ಯ.
ಡ್ರೆಸ್ ಕೋಡ್ ಏನು?
ನೀಟ್ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡ್ರೆಸ್ ಕೋಡ್ ನಿಗದಿ ಮಾಡಲಾಗಿದೆ. ಅದರಂತೆ ವಿದ್ಯಾರ್ಥಿಗಳು ಉಡುಪನ್ನು ಧರಿಸಿ ಪರೀಕ್ಷಾ ನಿಯಮ ಪಾಲಿಸುವುದು ಒಳಿತು.
ಪುರುಷ ಅಭ್ಯರ್ಥಿಗಳು ಸರಳವಾದ ಟಿ-ಶರ್ಟ್ ಧರಿಸಬಹುದು. ಅದರಲ್ಲಿ ಯಾವುದೇ ಜಿಪ್, ಪಾಕೆಟ್, ಬಟನ್ ಗಳು ಇರಬಾರದು. ಕುರ್ತಾ ಪೈಜಾಮ ಧರಿಸುವಂತಿಲ್ಲ, ಬದಲಾಗಿ ಸಾಮಾನ್ಯ ಪ್ಯಾಂಟ್ ಧರಿಸಬಹುದು. ಶೂ ಧರಿಸುವಂತಿಲ್ಲ.
ಮಹಿಳಾ ಅಭ್ಯರ್ಥಿಗಳು ಓಲೆ, ಸರ, ಉಂಗುರ, ಮೂಗುತಿ, ಬಲೆ ಮೊದಲಾದ ಲೋಹದ ವಸ್ತುಗಳನ್ನು ಧರಿಸುವಂತಿಲ್ಲ. ತುಂಬುದೋಳಿನ ಕುರ್ತಿ, ಕಸೂತಿ, ಹೂವುಗಳು, ಗುಂಡಿಗಳು ಇರುವಂತಹ ಬಟ್ಟೆಗಳನ್ನು ಧರಿಸುವಂತಿಲ್ಲ. ಪ್ಯಾಂಟ್ ಹಾಗೂ ಸಲ್ವಾರ್ ಧರಿಸಬಹುದು. ಮಹಿಳಾ ಅಭ್ಯರ್ಥಿಗಳೂ ಸಹ ಶೂ ಧರಿಸುವಂತಿಲ್ಲ.