ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಮುಜಫ್ಫರ್ ಪುರ್ ಆಶ್ರಯ ಮನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯ ನ್ಯಾಯಾಲಯ ಮುಖ್ಯ ಆರೋಪಿ ಬೃಜೇಶ್ ಠಾಕೂರ್ ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮುಜಫ್ಫರಪುರ್ ಆಶ್ರಯ ಮನೆಯಲ್ಲಿ ನಡೆದ ಯುವತಿಯರ ಕಿರುಕುಳ ಹಾಗೂ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿಯಾಗಿರುವ ಬೃಜೇಶ್ ಠಾಕೂರ್ ಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ್ ಸೌರಭ್ ಕುಲಶ್ರೇಷ್ಠ ಬೃಜೇಶ್ ಠಾಕೂರ್ ಗೆ ಈ ಶಿಕ್ಷೆ ಪ್ರಕಟಿಸಿದ್ದಾರೆ.
Muzaffarpur shelter home case: Delhi's Saket Court awards life term to accused Brajesh Thakur for the remainder of his life. pic.twitter.com/2YX9Ghpj8L
— ANI (@ANI) February 11, 2020
ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜನವರಿ 20 ರಂದು ಪೋಕ್ಸೋ ಕಾನೂನು ಹಾಗೂ ಇತರೆ IPC ಕಾಯ್ದೆಗಳ ಅಡಿ ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬೃಜೇಶ್ ಠಾಕೂರ್ ನನ್ನು ದೋಷಿ ಎಂದು ತೀರ್ಪು ಪ್ರಕಟಿಸಿತ್ತು.
ಫೆಬ್ರವರಿ 4 ರಂದು ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಆಶ್ರಯ ಮನೆಯೊಂದರಲ್ಲಿ ಹಲವು ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ಮತ್ತು ದೈಹಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬ್ರಜೇಶ್ ಠಾಕೂರ್ ಮತ್ತು ಇತರ 18 ಮಂದಿಗೆ ಫೆಬ್ರವರಿ 11 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ದೆಹಲಿ ನ್ಯಾಯಾಲಯ ನಿರ್ಧರಿಸಿತ್ತು.
ಪ್ರಕರಣದ ಹಿನ್ನೆಲೆ
- ವಿಚಾರಣೆಯ ವೇಳೆ CBI ವತಿಯಿಂದ ಒಟ್ಟು 69 ಸಾಕ್ಷ್ಯಗಳನ್ನು ದಾಖಲಿಸಲಾಗಿತ್ತು.
- ಸಿಬಿಐ ವತಿಯಿಂದ ವಕೀಲ ಅಮಿತ್ ಜಿಂದಾಲ್ ವಾದ ಮಂಡಿಸಿದ್ದರು
- ಪ್ರಕರಣದಲ್ಲಿ ಆಶ್ರಯ ಮನೆಯಲ್ಲಿ ಶಾರೀರಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಒಳಗಾದ ಸುಮಾರು 44 ಬಾಲಕಿಯರ ಹೇಳಿಕೆಗಳನ್ನು ಪಡೆಯಲಾಗಿದ್ದು, ಇವರಲ್ಲಿ 13 ಬಾಲಕಿಯರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು.
- ಕೆಲ ಆರೋಪಿಗಳ ಪರ ವಕೀಲ ಧೀರಜ್ ಕುಮಾರ್ ತಮ್ಮ ವಾದ ಮಂಡಿಸಿದ್ದರು.
- ಮಾರ್ಚ್ 30, 2019ರಂದು ಠಾಕೂರ್ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತು.
- ಈ ಪ್ರಕರಣದಲ್ಲಿ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ಹಾಗೂ ಪ್ರಸ್ತುತ JD(U) ಪಕ್ಷದಲ್ಲಿ ಮುಖಂಡೆಯಾಗಿರುವ ಮಂಜೂ ವರ್ಮಾ ವಿರುದ್ಧ ಕೂಡ ಆರೋಪ ಕೇಳಿಬಂದಿದ್ದವು. ಈ ಪ್ರಕರಣದ ಹಿನ್ನೆಲೆ ಅವರು, ಆಗಸ್ಟ್ 8, 2018ರಲ್ಲಿ ರಾಜೀನಾಮೆ ನೀಡಿದ್ದರು.
- ಫೆಬ್ರುವರಿ 7, 2019ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಪ್ರಕರಣವನ್ನು ಮುಜಫ್ಫರ್ ಪುರ್ ಸ್ಥಳೀಯ ನ್ಯಾಯಾಲಯದಿಂದ ದೆಹಲಿಯ ಸಾಕೆತ್ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
- ಮೇ.26, 2018 ರಂದು ಬಿಹಾರ ಸರ್ಕಾರಕ್ಕೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ರಿಸರ್ಚ್ ಸಂಸ್ಥೆ ವರದಿಯೊಂದನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.