ನವದೆಹಲಿ: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್ ವಿರುದ್ಧದ ತನಿಖೆಗೆ ಮತ್ತಷ್ಟು ಪುಷ್ಠಿ ನೀಡಲು, ದಾವೂದ್ ಇಬ್ರಾಹಿಂನ ಡಿ ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು ಡಿ ಕಂಪನಿಯ ಹವಾಲಾ ಅಪರೇಟರ್ ಆಗಿದ್ದ ಅಹಮದ್ ರಾಜಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಐಎಎನ್‌ಎಸ್‌ಗೆ ತಿಳಿಸಿದ್ದು, ಶಕೀಲ್ ಅವರ ಆಪ್ತನಾಗಿದ್ದ ಮತ್ತು ಹವಾಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಅಹಮದ್ ರಾಜಾನನ್ನು ಲುಕ್ ಔಟ್ ನೋಟಿಸ್ ಆಧಾರದ ಮೇಲೆ ಮಂಗಳವಾರ ಬಂಧಿಸಲಾಗಿದೆ ಎಂದಿದ್ದಾರೆ.
ಚೋಟಾ ಶಕೀಲ್ ಸಹಚರನಾದ ಅಹಮದ್ ರಾಜಾನನ್ನು ಕಳೆದ ತಿಂಗಳು ದುಬೈನಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತ ಸರ್ಕಾರ ಆತನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿತ್ತು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದುಬೈ ಸರ್ಕಾರ ರಾಜಾನನ್ನು ಭಾರತಕ್ಕೆ ಗಡಿಪಾರು ಮಾಡಿತ್ತು. ಬಳಿಕ ದುಬೈನಿಂದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಜಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.