ಮುಂಬೈ: ಮಹಾರಾಷ್ಟ್ರ ಸರ್ಕಾರದ ಜೆಜೆ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮಿನಿ ಸ್ಕರ್ಟ್ ಧರಿಸದಂತೆ ಹಾಗೂ ಸಮಾರಂಭಗಳಲ್ಲಿ ಹುಡುಗರ ಪಕ್ಕ ಕುಳಿತುಕೊಳ್ಳದಂತೆ ಖಡಕ್ ಆದೇಶ ನೀಡಿದೆ.
ಮಾರ್ಚ್ 21ರ ಹೋಳಿ ಕಾರ್ಯಕ್ರಮದ ಬಳಿಕ ಕಾಲೇಜು ಅಧಿಕಾರಿಗಳು ಈ ಆದೇಶ ಹೊರಡಿಸಿದ್ದು, ಪ್ರತಿಷ್ಟಿತ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ಈ ಆದೇಶದ ಬಳಿಕ ವಿದ್ಯಾರ್ಥಿನಿಯರು ಪಾದದ ವರೆಗೆ ಬಟ್ಟೆಯನ್ನು ತೊಟ್ಟು, ಮುಖವನ್ನು ಮುಚ್ಚಿಕೊಂಡು ಆಡಳಿತ ಮಂಡಳಿಯ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಕಾಲೇಜು ಆಡಳಿತ ಮಂಡಳಿಯು ಈ ಆದೇಶವನ್ನು ಫೇಸ್ಬುಕ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಕೂಡ ಮಾಡಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಲೇಜಿನ ಡೀನ್ ಡಾ.ಅಂಜನ್ ಚಂದನ್ವಾಲೆ ಅವರು, ವಿದ್ಯಾರ್ಥಿನಿಯರು ಸೂಕ್ತ ಉಡುಪುಗಳನ್ನು ಧರಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಹೋಳಿ ಕಾರ್ಯಕ್ರಮದಲ್ಲಿ ಕಂಡುಬಂದ ಕೆಲ ಘಟನೆಗಳಿಂದಾಗಿ ಆಡಳಿತ ಮಂಡಳಿ ಉಡುಪು ಧರಿಸುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಒಂದು ವೇಳೆ ಈ ಆದೇಶಕ್ಕೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದಲ್ಲಿ ಅವರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.