ಮುಂಬೈ: ನಗರದ ಛತ್ರಪತಿ ಮಹಾರಾಜ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ನಂ 1ರಲ್ಲಿ ಪಾದಚಾರಿ ಮೇಲ್ಸೇತುವೆ ಕುಸಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಸೇಂಟ್ ಜಾರ್ಜ್ ಮತ್ತು ಜಿಟಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಬಳಿ ಸಿ.ಎಸ್.ಟಿ ಪ್ಲಾಟ್ಫಾರ್ಮ್ ನಂಬರ್ ಒಂದನ್ನು ಬಿಟಿ ಲೇನ್ಗೆ ಸಂಪರ್ಕಿಸುವ ಅಡ್ಡ ಸೇತುವೆ ಕುಸಿದಿದೆ ಎಂದು ಮುಂಬಯಿ ಪೊಲೀಸರು ಟ್ವೀಟ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಘಟನೆಯಲ್ಲಿ ತೊಂದರೆಗೊಳಗಾಗಿರುವವರಿಗೆ ನಾವು ಸಂಪೂರ್ಣ ಸಹಕರಿಸುತ್ತೇವೆ. ರೈಲ್ವೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಎಂಸಿಯೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, "ಮುಂಬೈನಲ್ಲಿ ಪಾದಚಾರಿ ಮೇಲ್ಸೇತುವೆ ಕುಸಿತದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ನಾನು ಬಿಎಂಸಿ ಕಮಿಷನರ್ ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳಿಗೆ ಮಾತನಾಡಿದ್ದೇನೆ ಮತ್ತು ರೈಲ್ವೆ ಸಚಿವಾಲಯದೊಂದಿಗೂ ಮಾತನಾಡಿದ್ದು ರಕ್ಷಣಾ ಕಾರ್ಯ ವೇಗವಾಗಿ ನಡೆಸಲು ಸೂಚಿಸಲಾಗಿದೆ" ಎಂದಿದ್ದಾರೆ.
ಈ ಅಪಘಾತವನ್ನು ದುರದೃಷ್ಟಕರವೆಂದು ವಿವರಿಸಿದ ಅವರು, ಘಟನೆಯ ಬಗ್ಗೆ ಉನ್ನತ ಮಟ್ಟದ ವಿಚಾರಣೆಗೆ ಆದೇಶ ನೀಡಿರುವುದಾಗಿ ಹೇಳಿದರು.
ಅಪಘಾತದಲ್ಲಿ, ಮೃತಪಟ್ಟವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಫಡ್ನವೀಸ್ ತಿಳಿಸಿದ್ದಾರೆ. ಇದಲ್ಲದೆ, ಗಾಯಗೊಂಡವರಿಗೆ 50 ಸಾವಿರ ರೂ. ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಗಾಯಗೊಂಡವರಿಗೆ ರಾಜ್ಯ ಸರ್ಕಾರವೇ ಸಂಪೂರ್ಣ ಚಿಕಿತ್ಸೆ ನೀಡಲಿದೆ ಎಂದು ಅವರು ಹೇಳಿದರು.
Maharashtra CM Devendra Fadnavis: Ex-gratia of Rs 5 Lakh each will be given to the families of those who died in the incident and compensation of Rs 50,000 each will be given to the injured, state govt will provide for their treatment. https://t.co/oJZV1g8Uhg
— ANI (@ANI) March 14, 2019