ನವದೆಹಲಿ: ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಸಮ್ಮತಿ ದೊರೆತಿದೆ. ರಾಜ್ಯಸಭೆ 2019 ರ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆಯನ್ನು ಬುಧವಾರ ಅಂಗೀಕರಿಸಿತು. ಚರ್ಚೆಯ ನಂತರ ಮಸೂದೆ ವಿರುದ್ಧ 13 ಮತಗಳು ಮತ್ತು ಪರವಾಗಿ 108 ಮತಗಳೊಂದಿಗೆ ರಾಜ್ಯಸಭೆ ಮಸೂದೆಯನ್ನು ಅಂಗೀಕರಿಸಿತು.
ಜುಲೈ 23 ರಂದು ಲೋಕಸಭೆ ಈ ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆಯನ್ನು 2017ರಲ್ಲೇ ಪರಿಚಯಿಸಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು. 2019ರಲ್ಲಿ ಇದೇ ಮಸೂದೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯ ಮುಂದೆ ಇರಿಸಿದ್ದರು. ರಸ್ತೆ ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹೆಚ್ಚು ಪ್ರಮಾಣದ ಕಠಿಣ ದಂಡ ವಿಧಿಸುವ ನಿಯಮವನ್ನು ಮೋಟಾರು ವಾಹನ (ತಿದ್ದುಪಡಿ) ಮಸೂದೆ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಮಸೂದೆ ವಿರುದ್ಧ ದೇಶಾದ್ಯಂತ ಭಾರೀ ವಿರೋಧವೂ ವ್ಯಕ್ತವಾಗಿತ್ತು.
ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಈ ಮಸೂದೆ ಈಗ ಮತ್ತೆ ಲೋಕಸಭೆಗೆ ಹೋಗಲಿದೆ. ಈ ಮಸೂದೆಯನ್ನು ಕಳೆದ 16 ನೇ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ನಮೂದಿಸುವುದು ಯೋಗ್ಯವಾಗಿದೆ. ಆದರೆ ಲೋಕಸಭಾ ವಿಸರ್ಜನೆಯ ನಂತರ, ಹೊಸ ಸರ್ಕಾರವು ಅದನ್ನು 17 ನೇ ಲೋಕಸಭೆಯಲ್ಲಿ ಹಳೆಯ ಸ್ವರೂಪದಲ್ಲಿ ಇತರ ಕೆಲವು ತಿದ್ದುಪಡಿಗಳೊಂದಿಗೆ ಪ್ರಸ್ತುತಪಡಿಸಲು ನಿರ್ಧರಿಸಲಾಗಿದೆ.
ಪರಿಷ್ಕೃತ ಮಸೂದೆಯಲ್ಲಿ ಹಲವಾರು ಕಠಿಣ ನಿಬಂಧನೆಗಳು:
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಸೂದೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ನೀಡಿದೆ. ಚಾಲನೆ, ಅನಧಿಕೃತ ಚಾಲನೆ, ಅಪಾಯಕಾರಿ ವಾಹನ ಚಾಲನೆ, ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಕಾರನ್ನು ಓಡಿಸುವುದು ಮತ್ತು ವಾಹನದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಜನರ ಪ್ರಯಾಣ ಅಥವಾ ಹದಿಹರೆಯದ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಮುಂತಾದ ನಿಯಮಗಳನ್ನು ಉಲ್ಲಂಘಿಸಿದರೆ ವಾಹನ ಸವಾರರು, ಕಠಿಣ ಶಿಕ್ಷೆ ಹಾಗೂ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಗೆ ಕನಿಷ್ಠ ದಂಡ 1 ಸಾವಿರ ರೂ. ಆಗಲಿದ್ದು, 1 ಲಕ್ಷ ರೂ.ಗಳವರೆಗೂ ದಂಡ ವಿಧಿಸಲು ಅವಕಾಶವಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರಿಗೆ ದಂಡ ವಿಧಿಸಲಾಗುತ್ತದೆ!
ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯ:
ಹೊಸ ಕಾಯಿದೆಯ ಸೆಕ್ಷನ್ 194-ಬಿ ಅನ್ವಯ ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕಾರಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿದರೆ ವಾಹನ ಮಾಲೀಕರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಗು ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದರೆ, ಅವನು ಹೆಲ್ಮೆಟ್ ಧರಿಸಬೇಕಾಗುತ್ತದೆ.
ನೂತನ ವಿಧೇಯಕದನ್ವಯ ವಿಧಿಸುವ ದಂಡ ಈ ರೀತಿ ಇದೆ
* ಸಂಚಾರ ನಿಯಮ ಉಲ್ಲಂಘನೆಗೆ ₹ 500 ದಂಡ
* ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ ₹ 10,000 ದಂಡ, 6 ತಿಂಗಳು ಜೈಲು
* ಅತಿ ವೇಗದ ಚಾಲನೆ ₹ 1000 ದಿಂದ ₹ 2000 ದಂಡ, 3 ತಿಂಗಳು ಜೈಲು
* ಕುಡಿದು ವಾಹನ ಚಾಲನೆ ₹ 10,000 ದಂಡ, 6 ತಿಂಗಳು ಜೈಲು
* ಹೆಲ್ಮೆಟ್ ಧರಿಸದೆ ಡ್ರೈವಿಂಗ್ ₹1000 ದಂಡ
* ವಿಮೆ ರಹಿತ ವಾಹನ ಚಾಲನೆ ₹ 2000 ದಂಡ
* ಅಪ್ರಾಪ್ತರಿಂದ ವಾಹನ ಚಾಲನೆ ₹ 25,000 ದಂಡ(ಪೋಷಕರ ವಿರುದ್ಧ ಕಾನೂನು ಕ್ರಮ)
* ಲೈಸೆನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ ₹ 5000 ದಂಡ
* ಅತಿ ವೇಗದ ಚಾಲನೆಗೆ ₹ 1,000 ವರೆಗೆ ದಂಡ
* ವಾಹನಗಳ ಅಪಘಾತವಾದರೆ ಚಾಲಕರಿಗೆ ₹ 10 ಲಕ್ಷದ ವರೆಗೆ ದಂಡ
* ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಅಪರಾಧಕ್ಕೆ ₹ 5000 ದಂಡ, 6 ತಿಂಗಳು ಜೈಲು ಇತ್ಯಾದಿ