ಬೆಂಗಳೂರು: ಹಿಂದೊಮ್ಮೆ ನಮ್ಮ ರಾಜ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ರಫೇಲ್ ಡೀಲ್ ನಲ್ಲಿ ತಮಗೆಷ್ಟು ಪ್ರತಿಶತ ಕಮಿಷನ್ ಸಿಕ್ಕಿದೆ ಎಂದು ನೀವು ದೇಶದ ಜನತೆಗೆ ಉತ್ತರಿಸುವ ಸಮಯ ಬಂದಿದೆ. ನಿಮ್ಮಂತಹ ಮಹಾನ್ ಭಾಷಣಕಾರರು ಹೀಗೆ ಮೌನವಾದರೆ ಹೇಗೆ? ಎಂದು ವ್ಯಂಗ್ಯವಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಅನೇಕ ಯುದ್ಧವಿಮಾನಗಳನ್ನು ನಿರ್ಮಿಸಿದ ಕೀರ್ತಿ HAL ನದ್ದು:
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, HAL ಬಗೆಗೆ ವಿಶ್ವದಲ್ಲೇ ಅಪಾರ ಗೌರವವಿದೆ. ಅನೇಕ ಯುದ್ಧವಿಮಾನಗಳನ್ನು ನಿರ್ಮಿಸಿದ ಕೀರ್ತಿ ಈ ಸಂಸ್ಥೆಗಿದೆ. ಯುಪಿಎ ಸರ್ಕಾರ HALಗೆ ದೊರಕಿಸಿ ಕೊಟ್ಟಿದ್ದ ಕಾಂಟ್ರಾಕ್ಟ್ ಕಸಿದು ಖಾಸಗಿ ಕಂಪನಿಗೆ ಕೊಡಲಾಗಿದೆ. ಇದೆಲ್ಲವೂ ಮೋದಿಯವರ ಒಪ್ಪಿಗೆ ಇಲ್ಲದೆ ನಡೆಯಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ಪ್ರಧಾನಿ ವಿದೇಶ ಯಾತ್ರೆ:
ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಮತ್ತೊಂದು ಟ್ವೀಟ್ ಮೂಲಕ ಹರಿಹೈದಿರುವ ಸಿದ್ದರಾಮಯ್ಯ, ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು? ರಿಲಯನ್ಸ್ ಡಿಫೆನ್ಸ್ ಗೆ ಅವಕಾಶ ಕಲ್ಪಿಸುವ ಮೂಲಕ ನರೇಂದ್ರ ಮೋದಿಯವರು ಹಿಂಬಾಗಿಲ ಮೂಲಕ ಫ್ರಾನ್ಸ್ ನೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆ ಮೂಲಕ ನಮ್ಮ ಸೇನೆ ಹಾಗೂ ಸರ್ಕಾರಿ ಸ್ವಾಮ್ಯದ HAL ಅನ್ನು ಅಪಮಾನಿಸಿದ್ದಾರೆ ಎಂದಿದ್ದಾರೆ.
ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ:
ಮಾನ್ಯ ನರೇಂದ್ರ ಮೋದಿಯವರೇ, ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ, ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ರಫೇಲ್ ಬಗ್ಗೆಯಾದರೂ ಮಾತನಾಡಿ. ರಫೇಲ್ ಡೀಲ್ ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ಡಾಲರ್ ಮೌಲ್ಯ ಇಂದು ರೂ.74ರ ಗಡಿ ದಾಟುತ್ತಿರಲಿಲ್ಲ ಎಂದಿದ್ದಾರೆ.