ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹೊಸ ಯೋಜನೆಗಳನ್ನು ಮೋದಿ ಸರ್ಕಾರ ಪ್ರಾರಂಭಿಸಿದೆ. ಅದೇ ಅನುಕ್ರಮದಲ್ಲಿ ಕಳೆದ 24 ಗಂಟೆಗಳಲ್ಲಿ ಮೋದಿ ಸರ್ಕಾರವು ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. ಎಲ್ಲಾ ಬಡ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕವನ್ನು ನೀಡುವ ಬಗ್ಗೆ ಮಂಗಳವಾರ, ಸರ್ಕಾರ ಮಾತನಾಡಿದೆ. ಜೊತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಇನ್ನಷ್ಟು ಸರಳೀಕರಿಸುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಹೌದು, ಶೇಕಡ 99 ಸರಕುಗಳ ಮೇಲಿನ ಜಿಎಸ್ಟಿ ಯನ್ನು ಶೇಕಡ 18 ರ ಅಥವಾ ಅದಕ್ಕಿಂತ ಕಡಿಮೆ ಶ್ರೇಣಿಗೆ ತರಲು ಸರ್ಕಾರ ಕಾರ್ಯೋನ್ಮುಖವಾಗಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಐಷಾರಾಮಿ ಉತ್ಪನ್ನಗಳಿಗೆ ಮಾತ್ರ 28% ಜಿಎಸ್ಟಿ:
ಐಷಾರಾಮಿ ಉತ್ಪನ್ನಗಳಂತಹ ಕೆಲವು ಆಯ್ದ ಸರಕುಗಳ ಮೇಲೆ ಮಾತ್ರ 28% ಜಿಎಸ್ಟಿ ಮುಂದುವರೆಯಲಿದೆ ಎಂದು ಮೋದಿ ಸೂಚಿಸಿದ್ದಾರೆ. "ಇಂದು, ಜಿಎಸ್ಟಿ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಲಾಗಿದೆ ಮತ್ತು ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಶೇ, 99 ರಷ್ಟು ಪದಾರ್ಥಗಳನ್ನು ಶೇ. 18 ಜಿಎಸ್ಟಿ ವ್ಯಾಪ್ತಿಗೆ ತರುವುದು ಸರ್ಕಾರದ ಗುರಿಯಾಗಿದೆ" ಎಂದು ಪ್ರಧಾನಿ ಮೋದಿ ತಿಳಿಸಿದರು.
"ಆರಂಭಿಕ ದಿನಗಳಲ್ಲಿ, ಜಿಎಸ್ಟಿ ವಿವಿಧ ರಾಜ್ಯಗಳಲ್ಲಿ ವ್ಯಾಟ್ ಅಥವಾ ಅಬಕಾರಿ ಸುಂಕದ ಆಧಾರದ ಮೇಲೆ ತಯಾರಿಸಲ್ಪಟ್ಟಿದೆ, ಆದರೆ ನಂತರದ ದಿನಗಳಲ್ಲಿ ತೆರಿಗೆ ವ್ಯವಸ್ಥೆಯು ಸುಧಾರಿಸುತ್ತಿದೆ" ಎಂದು ಅವರು ಹೇಳಿದರು.
ದೇಶದಲ್ಲಿ ದಶಕಗಳಿಂದ ಜಿಎಸ್ಟಿಗೆ ಬೇಡಿಕೆ ಇತ್ತು ಎಂದು ತಿಳಿಸಿದ ಮೋದಿ, ಜಿಎಸ್ಟಿ ಅನುಷ್ಠಾನದ ಬಳಿಕ ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುತ್ತಿವೆ. ವ್ಯವಸ್ಥೆಯಲ್ಲಿ ದಕ್ಷತೆ ಸುಧಾರಿಸುತ್ತಿದೆ ಎಂದು ಹೇಳಸು ನನಗೆ ಸಂತೋಷವಾಗಿದೆ. ಆರ್ಥಿಕತೆ ಕೂಡ ಪಾರದರ್ಶಕವಾಗಿದೆ ಎಂದು ಹೇಳಿದರು.
ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ:
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಕೇವಲ ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರವಲ್ಲದೆ ಎಲ್ಲ ವರ್ಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೂ ವಿಸ್ತರಿಸುವ ಕುರಿತು ಅನುಮೋದನೆ ನೀಡಿದೆ. ಈ ನಡೆಯಿಂದಾಗಿ ಶೇ. 100ರಷ್ಟು ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. 2016ರ ಮೇ 1ರಂದು ಈ ಯೋಜನೆಯು ಪ್ರಾರಂಭವಾಯಿತು. ಇದರ ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸಲಾಗುತ್ತಿತ್ತು.
ಈ ಯೋಜನೆಯಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಪ್ರತಿ ಸಂಪರ್ಕಕ್ಕೆ 1,600 ರೂ. ಗಳನ್ನೂ ಸಬ್ಸಿಡಿ ನೀಡುತ್ತದೆ. ಈ ಸಬ್ಸಿಡಿ ಸಿಲಿಂಡರ್ ಭದ್ರತೆ ಶುಲ್ಕ ಮತ್ತು ಫಿಟ್ಟಿಂಗ್ ಶುಲ್ಕಗಳಿಗಾಗಿ ಆಗಿದೆ.