Lok Sabha Election Result 2024: ಮ್ಯಾಜಿಕ್ ನಂಬರ್ 272, BJPಗೆ ಸಿಗದ ಸರಳ ಬಹುಮತ, ಕಿಂಗ್ ಮೇಕರ್ ಯಾರು?

Lok Sabha Election Result 2024: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ.

Written by - Puttaraj K Alur | Last Updated : Jun 5, 2024, 09:29 AM IST
  • ಮ್ಯಾಜಿಕ್ ನಂಬರ್ 272; ಬಿಜೆಪಿ vs ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ಎಷ್ಟಿದೆ?
  • NDA ಮೈತ್ರಿಕೂಟದೊಂದಿಗೆ ೩ನೇ ಅವಧಿಗೂ ಪ್ರಧಾನಿಯಾಗ್ತಾರಾ ನರೇಂದ್ರ ಮೋದಿ?
  • ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಸರ್ಕಾರ ರಚಿಸುವ ಅವಕಾಶವಿದೆಯಾ?
Lok Sabha Election Result 2024: ಮ್ಯಾಜಿಕ್ ನಂಬರ್ 272, BJPಗೆ ಸಿಗದ ಸರಳ ಬಹುಮತ, ಕಿಂಗ್ ಮೇಕರ್ ಯಾರು? title=
ಯಾರಾಗ್ತಾರೆ ಕಿಂಗ್‌ ಮೇಕರ್?

Lok Sabha Election Result 2024: 2014, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದ ಬಿಜೆಪಿಗೆ ಈ ಬಾರಿ ಆಘಾತವಾಗಿದೆ. 2014ರ ಚುನಾವಣೆಯಲ್ಲಿ 273 ಮತ್ತು 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಯಾವುದೇ ಟೆನ್ಶನ್‌ ಇಲ್ಲದೆ ಬಿಜೆಪಿ ಸರ್ಕಾರ ರಚಿಸುವ ಮೂಲಕ 10 ವರ್ಷಗಳ ಕಾಲ ಕಿಂಗ್‌ ಆಗಿ ಮೆರೆದಿತ್ತು. ಆದರೆ ಬಾರಿ ಮತದಾರ ಬಿಜೆಪಿಗೆ ಕೈಕೊಟ್ಟಿದ್ದಾನೆ. ಉತ್ತರಪ್ರದೇಶದ ಅಯೋಧ್ಯೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಗೆ ಮತದಾರ ಮಣೆಹಾಕಿಲ್ಲ. ಬಿಜೆಪಿ ಈ ಬಾರಿ 242 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.  

ಲೋಕಸಭೆಯ ಮ್ಯಾಜಿಕ್ ನಂಬರ್ 272. ಬಿಜೆಪಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, NDA ಮೈತ್ರಿಕೂಟ 295 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಈ ಬಾರಿ 98 ಸ್ಥಾನಗಳನ್ನು ಗಳಿಸಿದ್ದು, ಇಂಡಿಯಾ ಮೈತ್ರಿಕೂಟವು 231 ಸ್ಥಾನಗಳನ್ನು ಪಡೆದುಕೊಂಡಿವೆ. 17 ಕ್ಷೇತ್ರಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ. ಸದ್ಯ ಪ್ರಧಾನಿ ಮೋದಿಯವರೇ 3ನೇ ಅವಧಿಗೂ ಪ್ರಧಾನಿಯಾಗಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಸರ್ಕಾರ ರಚಿಸಲು ಇದೀಗ ಬಿಜೆಪಿ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇಂತಹ ಸನ್ನಿವೇಶದಲ್ಲಿ ಯಾರು ಕಿಂಗ್‌ ಮೇಕರ್‌ ಆಗುತ್ತಾರೆ? ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಸರ್ಕಾರ ರಚಿಸಲು ಅವಕಾಶ ಇದೆಯೇ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್

ದೇಶದಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹೊಸದಲ್ಲ.1989ರಿಂದ 2014ರವರೆಗೂ ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳೇ ಆಡಳಿತ ನಡೆಸಿವೆ. ಬಹುತೇಕ ಮೈತ್ರಿ ಸರ್ಕಾರಗಳು ಪೂರ್ಣ ಅವಧಿವರೆಗೆ ಆಡಳಿತ ನಡೆಸಿಲ್ಲ. ವಿಶೇಷವೆಂದರೆ 1999-2014ರವರೆಗೆ ಮೈತ್ರಿ ಸರ್ಕಾರಗಳು ಪೂರ್ಣ ಅವಧಿ ಆಡಳಿತ ನಡೆಸಿದ್ದವು. ಇದೀಗ ಮತ್ತೆ ಮೈತ್ರಿ ಆಡಳಿತ ದೇಶಕ್ಕೆ ಅನಿವಾರ್ಯ ಎನಿಸಿದೆ. ಬಿಜೆಪಿ ನೇತೃತ್ವದ NDA ಮೈತ್ರಿ ಸರ್ಕಾರ ನಡೆಸುತ್ತಾ ಅಥವಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಸರ್ಕಾರ ರಚಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ.   

ಮ್ಯಾಜಿಕ್ ನಂಬರ್ 272; ಬಿಜೆಪಿ vs ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ಎಷ್ಟಿದೆ?: ಸದ್ಯದ ಚುನಾವಣಾ ಫಲಿತಾಂಶದ ಪ್ರಕಾರ, 543 ಸದಸ್ಯ ಬಲದ ಲೋಕಸಭೆಯಲ್ಲಿ 272 ಮ್ಯಾಜಿಕ್ ನಂಬರ್. ಕಳೆದ 2 ಅವಧಿಯಲ್ಲಿ ಬಿಜೆಪಿ ಈ ಮ್ಯಾಜಿಕ್ ನಂಬರ್ ದಾಟುವ ಮೂಲಕ ಜನಾದೇಶವನ್ನು ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, 98 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ ಯಾರಿಗೆ ಯಾರು ಬೆಂಬಲ ನೀಡುತ್ತಾರೆ? ಯಾರ ಬೆಂಬಲದಿಂದ ಯಾರು ಸರ್ಕಾರ ರಚಿಸುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. 

ಬಿಜೆಪಿಗೆ ಸಿಗದ ಸರಳ ಬಹುಮತ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 242 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯುನ ನಿತೀಶ್ ಕುಮಾರ್‌ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆಗೆ ಹೊಂದಾಣಿಕೆ ಕಷ್ಟವೆಂದು ಹೇಳಲಾಗುತ್ತಿದೆ. ಈ ಇಬ್ಬರು ನಾಯಕರು ಬಿಜೆಪಿಗೆ ಡಿಮ್ಯಾಂಡ್‌ ಮಾಡಬಹುದು? ಅಥವಾ BJP ನಂಟು ಕಡಿದುಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ʼಕೈʼ ಜೋಡಿಸಬಹುದು. 

NDA ಮೈತ್ರಿಗೆ ಸರಳ ಬಹುಮತ: ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾದರೂ ಸರಳ ಬಹುಮತವಿಲ್ಲದ ಕಾರಣ ಮಿತ್ರ ಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸುವಾಗ ಸ್ವಲ್ಪವೇ ಏರುಪೇರಾದರೂ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಳೆದ 2 ಬಾರಿ ಯಾವುದೇ ಟೆನ್ಶನ್‌ ಇಲ್ಲದೆ ಸರ್ಕಾರ ರಚಿಸಿದ್ದ ಬಿಜೆಪಿಗೆ ಇದೀಗ ಮೈತ್ರಿಯ ದೊಡ್ಡ ಟೆನ್ಶನ್‌ ಶುರುವಾಗಿದೆ. ಯಾವ ಹೊತ್ತಿನಲ್ಲಿ ಯಾರು ಕೈಕೊಡುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಕಿಂಗ್ ಮೇಕರ್ ಆಗಿ ಜೆಡಿಯು! ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ 2 ದಿನ ಮೊದಲೇ ದೆಹಲಿ ಪ್ರವಾಸ ಕೈಗೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್‌ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬಿಜೆಪಿಗೆ ಸರಳ ಬಹುಮತ ಇಲ್ಲದಿರುವ ಕಾರಣ ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಈ ಹಿಂದೆ ಬಿಜೆಪಿ ಜೊತೆಗೆ ಬಹುಕಾಲದ ಮೈತ್ರಿ ಕಡಿದುಕೊಂಡಿದ್ದ ಜೆಡಿಯು ಬಳಿಕ ಆರ್‌ಜೆಡಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ನಂತರ ಯೂಟರ್ನ್ ಹೊಡೆದು ಮತ್ತೆ ಬಿಜೆಪಿ ಜೊತೆಗೆ ಕೈ ಜೋಡಿಸಿತ್ತು. ಹೀಗಾಗಿ ಜೆಡಿಯು ಕಿಂಗ್ ಮೇಕರ್ ಆದರೆ ಈ ಕಿರಿಕಿರಿ ತಪ್ಪುವುದಿಲ್ಲ. ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 12ರಲ್ಲಿ ಗೆಲುವು ಸಾಧಿಸಿದೆ.  

ಇದನ್ನೂ ಓದಿ: ಇಂದು ಭಾರತೀಯ ಷೇರು ಮಾರುಕಟ್ಟೆ ಕುಸಿಯುತ್ತಿರುವುದೇಕೆ ?

ಕಿಂಗ್ ಮೇಕರ್ ಆಗಿ ಟಿಡಿಪಿ ಪಾತ್ರ: ಆಂಧಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಸಹ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ. ಚಂದ್ರಬಾಬು ನಾಯ್ಡು ಈ ಸಲ NDA ಮೈತ್ರಿಯಲ್ಲಿದ್ದು, ಬಿಜೆಪಿಗೆ ಸರ್ಕಾರ ರಚಿಸುವಲ್ಲಿ ನೆರವಾಗಬಹುದು. 2019ರ ಲೋಕಸಭಾ ಚುನಾವಣೆ ವೇಳೆ NDAಯಿಂದ ಟಿಡಿಪಿ ದೂರ ಉಳಿದಿತ್ತು. ಈ ಬಾರಿಯ ಮತ್ತೆ NDA ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಆಂಧ್ರದಲ್ಲಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಇದು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. NDA ಮೈತ್ರಿ ಬಿಟ್ಟ ಬಳಿಕ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಹೀಗಾಗಿ ಬಿಜೆಪಿಗೆ ಇದು ಟೆನ್ಶನ್‌ ಹೆಚ್ಚಿಸಿದೆ.

ಕಾಂಗ್ರೆಸ್‌ ಸರ್ಕಾರ ರಚಿಸಲು ಅವಕಾಶವಿದೆಯೇ?: ಇನ್ನು ಈ ಬಾರಿ ಕಾಂಗ್ರೆಸ್‌ ಮ್ಯಾಜಿಕ್‌ ಮಾಡಿದ್ದು, ಬಿಜೆಪಿಗೆ ಆಘಾತ ನೀಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಫಿನಿಕ್ಸ್‌ನಂತೆ ಮೇಲೆದ್ದು, 98 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಕೇವಲ 94 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಮೈತ್ರಿಕೂಟವು ಈ ಬಾರಿ 231 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ NDA ಮೈತ್ರಿಕೂಟದ ಕೆಲವರ ಬೆಂಬಲ ಹಾಗೂ ಇತರರು ಕೈಜೋಡಿಸಿದರೆ ಕಾಂಗ್ರೆಸ್‌ ಸರ್ಕಾರ ರಚಿಸುವುದು ಕಷ್ಟಸಾಧ್ಯವೇನಲ್ಲ. ಹೀಗಾಗಿ ಕೇಂದ್ರದಲ್ಲಿ ಯಾರ ಸಹಕಾರದಿಂದ ಮತ್ತೆ ಯಾರು ಅಧಿಕಾರಕ್ಕೆ ಬರುತ್ತಾರೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News