ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರಿಗೆ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟಾಗಿದ್ದರಿಂದಾಗಿ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಲಾಲು ಅವರನ್ನು ಪ್ರಸ್ತುತ ಜಾರ್ಖಂಡ್‌ನ ರಾಂಚಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಈಗ ಲಾಲೂ ಪ್ರಸಾದ್ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿರುವ ವೈದ್ಯ ಪಿಕೆ ಜಾ 'ಲಾಲು ಯಾದವ್ ಅವರ ಮೂತ್ರಪಿಂಡವು ಕೇವಲ 37ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ ಮತ್ತು ಶೇಕಡಾ 63 ರವರೆಗೆ ಹಾನಿಯಾಗಿದೆ. ಕಳೆದ ಒಂದು ವಾರದಿಂದ ಅವರ ಸ್ಥಿತಿ ಅಸ್ಥಿರವಾಗಿದೆ' ಎಂದು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಲಾಲು ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಜಾ ಹೇಳಿದ್ದಾರೆ.
ಲಾಲು ಅವರ ಕಿರಿಯ ಮಗ ಮತ್ತು ಬಿಹಾರದ ಮಾಜಿ ಉಪ ಸಿಎಂ ತೇಜಶ್ವಿ ಯಾದವ್ ಅವರನ್ನು ಶನಿವಾರ ಭೇಟಿಯಾಗಿ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದ್ದು, ಅವರ ತಂದೆಯ ಆರೋಗ್ಯದ ಬಗ್ಗೆ ತೀವ್ರ ಆತಂಕವಿದೆ. ತನ್ನ ತಂದೆಗೆ ಉತ್ತಮ ಚಿಕಿತ್ಸೆ ಬೇಕು ಎಂದು ತೇಜಶ್ವಿ ಹೇಳಿದರು. ರಾಂಚಿಯ ಹೊರಗೆ ಲಾಲುಗೆ ಚಿಕಿತ್ಸೆ ನೀಡಬೇಕೆ ಎಂದು ಕೇಳಿದಾಗ, ಇದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಆದರೆ ಅವರಿಗೆ ಉತ್ತಮ ಚಿಕಿತ್ಸೆ ಬೇಕು ಅಷ್ಟೇ ಎಂದು ಹೇಳಿದರು.