ಕೇರಳದಲ್ಲಿ ವರುಣನ ರುದ್ರನರ್ತನ: ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 76ಕ್ಕೆ ಏರಿಕೆ

ಆಗಸ್ಟ್ 12 ರಿಂದ ಆಗಸ್ಟ್ 16ರವರೆಗೆ ಕೇರಳದ ಕೆಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ. 

Last Updated : Aug 12, 2019, 01:47 PM IST
ಕೇರಳದಲ್ಲಿ ವರುಣನ ರುದ್ರನರ್ತನ: ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 76ಕ್ಕೆ ಏರಿಕೆ title=

ತಿರುವನಂತಪುರಂ: ಕೇರಳದಲ್ಲಿ ವರುಣನ ರುದ್ರನರ್ತನದಿಂದಾಗಿ ಉಂಟಾಗಿರುವ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, 58 ಮಂದಿ ನಾಪತ್ತೆಯಾಗಿದ್ದಾರೆ. 

ಈ ಬಗ್ಗೆ ಕೇರಳ ಮುಖ್ಯಮಂತ್ರಿಗಳ ಕಚೇರಿಯು ಟ್ವೀಟ್ ಮಾಡಿದ್ದು, "ಪ್ರವಾಹದಲ್ಲಿ 76 ಮಂದಿ ಸಾವನ್ನಪ್ಪಿದ್ದು, 58 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯಾದ್ಯಂತ 1654 ಪ್ರವಾಹ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು,  83274 ಕುಟುಂಬಗಳ 287585 ಜನರಿಗೆ ಆಶ್ರಯ ನೀಡಲಾಗಿದೆ" ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಯು ಟ್ವೀಟ್ ಮಾಡಿದೆ. 

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡು ಪ್ರವಾಹಕ್ಕೆ ಹೆಚ್ಚು ತತ್ತರಿಸಿದ್ದು, ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ರಾಹುಲ್ ಸಾಂತ್ವನ ಹೇಳಿದ್ದಾರೆ.

ಮತ್ತೊಂದೆಡೆ, ಆಗಸ್ಟ್ 12 ರಿಂದ ಆಗಸ್ಟ್ 16ರವರೆಗೆ ಕೇರಳದ ಕೆಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಪ್ರತಿ ಗಂಟೆಗೆ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ನೈರುತ್ಯ, ಮಧ್ಯ ಮತ್ತು ಉತ್ತರ ಅರೇಬಿಯನ್ ಸಮುದ್ರ ಮತ್ತು ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ತೀರಗಳು, ಲಕ್ಷದ್ವೀಪ ಪ್ರದೇಶ, ದಕ್ಷಿಣ ತಮಿಳುನಾಡು ಕರಾವಳಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಕೇರಳವಷ್ಟೇ ಅಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿಯೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 30ಕ್ಕೂ ಅಧಿಕ ಜಿಲ್ಲೆಗಳು ಪ್ರವಾಹಕ್ಕೆ ಮುಳುಗಡೆಯಾಗಿವೆ. ಪ್ರವಾಹದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ನೂರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. 

Trending News