ಲಕ್ನೋ: ದೇಶದಾದ್ಯಂತ ಕರ್ವಾ ಚೌತ್ ಸಂಭ್ರಮ ಮನೆಮಾಡಿದೆ. ವಿವಾಹಿತ ಮಹಿಳೆಯರಿಗೆ ವಿಶೇಷವಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಕರ್ವಾ ಚೌತ್ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈಗಾಗಲೇ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಪ್ರಾರ್ಥಿಸಲು ಉಪವಾಸ ವೃತ ಕೈಗೊಂಡಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮುಜಾಫರ್ನಗರದಲ್ಲಿ ಕರ್ವಾ ಚೌತ್ ವೇಳೆ ಹಿಂದೂ ಹೆಣ್ಣುಮಕ್ಕಳಿಗೆ ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ತು(VHP) ಸೇರಿ ಇತರೆ ಹಿಂದೂಪರ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ. ಕರ್ವಾ ಚೌತ್ ಹಬ್ಬದ ಆಚರಣೆ ವೇಳೆ ಉಪವಾಸ ವೃತ ಕೈಗೊಳ್ಳುವ ಹಿಂದೂ ಹೆಣ್ಣುಮಕ್ಕಳು ತಮ್ಮ ಕೈಗೆ ಮೆಹೆಂದಿ ಹಾಕಿಕೊಳ್ಳುವುದು ಸಂಪ್ರದಾಯ. ಈ ಹಬ್ಬದಂದು ಹೆಚ್ಚಾಗಿ ಮುಸ್ಲಿಂ ಸಮುದಾಯದವರೇ ಹಿಂದೂಗಳಿಗೆ ಮೆಹೆಂದಿ ಹಾಕುತ್ತಾರೆ. ಮೆಹೆಂದಿ ಹಾಕುವಾಗ ಹಿಂದೂ ಹೆಣ್ಣುಮಕ್ಕಳಿಗೆ ಆಮಿಷ ಒಡ್ಡಿ ‘ಲವ್ ಜಿಹಾದ್’ ಮೂಲಕ ಮತಾಂತರಕ್ಕಾಗಿ ಪ್ರೇರೇಪಿಸಲಾಗುತ್ತದೆ ಅಂತಾ ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಇದನ್ನೂ ಓದಿ: Viral Video : ಮಾತಿನಲ್ಲೇ ನಿರತನಾಗಿದ್ದ ವರ, ಹಿಂದಿನಿಂದ ವಧುವನ್ನು ಹೊತ್ತೊಯ್ದ ಪ್ರೇಮಿ
ಕರ್ವಾ ಚೌತ್ ಪ್ರಯುಕ್ತ ಮುಜಾಫರ್ನಗರ ಜಿಲ್ಲೆಯಲ್ಲಿ ಮೆಹೆಂದಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಹಿಂದೂ ಮಹಿಳೆಯರು ತಮ್ಮ ಕೈಗಳಿಗೆ ಹಿಂದೂಗಳಿಂದ ಮಾತ್ರ ಗೋರಂಟಿ ಹಾಕಿಸಿಕೊಳ್ಳಬೇಕು ಅಂತಾ ಕಟ್ಟಾಜ್ಞೆ ಹೊರಡಿಸಲಾಗಿದೆ. ‘ಹಿಂದೂ ಹೆಣ್ಣುಮಕ್ಕಳು ಮೆಹೆಂದಿ ಹಾಕಿಕೊಳ್ಳಲು ಅನುಕೂಲವಾಗುವಂತೆ 13 ಮೆಹೆಂದಿ ಅಂಗಡಿಗಳನ್ನು ತೆರೆಯಲಾಗಿದೆ. ನಮ್ಮ ಸೊಸೆ, ಹೆಣ್ಣುಮಕ್ಕಳಿಗೆ ಹಿಂದೂಗಳೇ ಈ ಅಂಗಡಿಗಳಲ್ಲಿ ಮೆಹೆಂದಿ ಹಾಕಲಿದ್ದಾರೆ’ ಅಂತಾ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡರೊಬ್ಬರು ಹೇಳಿದ್ದಾರೆ.
‘ಜಿಲ್ಲೆಯಲ್ಲಿರುವ ಎಲ್ಲಾ ಮಾರುಕಟ್ಟೆಗಳಲ್ಲಿ ನಮ್ಮ ಸಂಘಟನೆಗಳ ಯುವಕರು ಕಣ್ಗಾವಲಿದ್ದಾರೆ. ಮುಸ್ಲಿಂ ಸಮುದಾಯದ ಯಾವುದೇ ಒಬ್ಬ ವ್ಯಕ್ತಿ ಹಿಂದೂ ಹೆಣ್ಣುಮಕ್ಕಳಿಗೆ ಮೆಹಂದಿ ಹಾಕುವುದು ಕಂಡುಬಂದರೆ ಅಂತವರಿಗೆ ನಾವ ತಕ್ಕಪಾಠ ಕಲಿಸುತ್ತೇವೆ’ ಅಂತಾ ಹಿಂದೂ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್ ಆಗ್ತೀರಾ!
ಹಿಂದೂ ಹೆಣ್ಣುಮಕ್ಕಳಿಗೆ ಮೆಹೆಂದಿ ಹಾಕುವ ಮುಸ್ಲಿಂ ಯುವಕರನ್ನು ಪತ್ತೆ ಹಚ್ಚಲು ಬಜರಂಗದಳದ 8 ಜನರ ತಂಡ ರಚಿಸಲಾಗಿದೆ. ಈ ಸಂಘಟನೆಯ ಸದಸ್ಯರು ಮಾರುಕಟ್ಟೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಗೋರಂಟಿ ಹಾಕುವವರನ್ನು ಆಧಾರ್ ಕಾರ್ಡ್ ನೋಡಿ ಗುರುತಿಸಲಾಗುತ್ತದೆ. ಯಾವುದೇ ಮುಸ್ಲಿಂ ಯುವಕರು ಮೆಹಂದಿ ಹಾಕುತ್ತಿರುವುದು ಕಂಡು ಬಂದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು. ಈ ಹಿಂದೆ ಕ್ರಾಂತಿ ಸೇನೆ ಕೂಡ ವ್ಯಾಪಾರಿಗಳು, ಅಂಗಡಿಕಾರರು ಹಾಗೂ ಮುಸ್ಲಿಂ ಯುವಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಧರ್ಮದೊಂದಿಗೆ ಆಟವಾಡುವುದನ್ನು ಸಹಿಸುವುದಿಲ್ಲವೆಂದು ಕ್ರಾಂತಿ ಸೇನೆ ಹೇಳಿತ್ತು. ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುತ್ತಿರುವುದು ಕಂಡುಬಂದರೆ ಯಾರನ್ನೂ ಬಿಡುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಅಂತಾ ಸಂದೇಶ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.