ನವದೆಹಲಿ: ಕಾರ್ಗಿಲ್ ವಿಜಯ್ ದಿನಾಚರಣೆಗೆ ಇಂದು 21 ವರ್ಷ ಪೂರ್ಣಗೊಂಡಿವೆ. 1999 ರಲ್ಲಿ ಇದೆ ದಿನ ಭಾರತೀಯ ಸೇನೆ ಪಾಕ್ ಸೇನೆಯ ಮೇಲೆ ತನ್ನ ವಿಜಯ ಪತಾಕೆಯನ್ನು ಹಾರಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ಬಿಪಿನ್ ರಾವತ್ ಹಾಗೂ ಮೂರು ಸೇನಾ ಮುಖ್ಯಸ್ಥರು ದೆಹಲಿಯ ನ್ಯಾಷನಲ್ ವಾರ್ ಮೆಮೋರಿಯಲ್ ನಲ್ಲಿ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಆರ್ಪಿಸಿದ್ದಾರೆ.
21 ವರ್ಷಗಳ ಹಿಂದೆ ಜುಲೈ 26ರಂದು ಭಾರತೀಯ ಸೇನೆ ಮೆರೆದ ಸಾಹಸ ಮತ್ತು ಶೌರ್ಯಕ್ಕೆ ಇತಿಹಾಸದಲ್ಲಿ ಸರಿಸಾಟಿ ಇಲ್ಲ. ಶತ್ರುಗಳು ಕಬಳಿಸಿದ ಶಿಖರಗಳ ಮೇಲೆಯೇ ಶತ್ರುಗಳನ್ನು ಮಟ್ಟಹಾಕಿ ಅವರಿಂದ ಶಿಖರಗಳನ್ನು ವಶಕ್ಕೆ ಪಡೆದು ಭಾರತೀಯ ಯೋಧರ ಪ್ರರಾಕ್ರಮವನ್ನು ನಾವು ಕೇವಲ ಊಹಿಸಿಕೊಳ್ಳಲು ಮಾತ್ರ ಸಾಧ್ಯ. ಹೀಗಾಗಿ ಈ ದಿನದಂದು ಇಡೀ ದೇಶ ಕಾರ್ಗಿಲ್‌ನಲ್ಲಿ ಹುತಾತ್ಮರಾದ ಹುತಾತ್ಮ ಸೈನಿಕರಿಗೆ ಸೆಲ್ಯೂಟ್ ಹೇಳುತ್ತಿದೆ. ಇಡೀ ದೇಶ ಇಂದು ವಿಜಯೋತ್ಸಾಹವನ್ನು ಆಚರಿಸುತ್ತಿದೆ. ಕಾರ್ಗಿಲ್‌ನ ಎತ್ತರದ ಬೆಟ್ಟಗಳನ್ನು ಪಾಕ್ ಸೈನಿಕರು ಕಬಳಿಸಿದ್ದರು. ಬಳಿಕ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಭಾರತೀಯ ಸೈನಿಕರ ಆಪರೇಶನ್ ವಿಜಯ್ ಆರಂಭಿಸಿ ಇತಿಹಾಸ ಬರೆದಿದ್ದರು.
ಅಕ್ಟೋಬರ್ 1998ರಲ್ಲಿ ಅಂದಿನ ಪಾಕ್ ಅಧ್ಯಕ್ಷ ಮುಷರಫ್ ಅವರು ಕಾರ್ಗಿ ಪ್ಲಾನ್ ಗೆ ಅನುಮತಿ ನೀಡಿದ್ದರು. ಈ ಎತ್ತರದ ಪ್ರದೇಶವನ್ನು ಕಬಳಿಸಿದ ಬಳಿಕ ಈ ಪ್ರದೇಶ ಪಾಕಿಸ್ತಾನಕ್ಕೆ ಸೇರಲಿದೆ ಎಂದು ಅವರಿಗೆ ಅನ್ನಿಸಿತ್ತು. ಆದರೆ, ಭಾರತೀಯ ಅದಮ್ಯ ಸಾಹಸದ ಅರಿವು ಅವರಿಗಿರಲಿಲ್ಲ. ಆಗ ಭಾರತೀಯ ಸೇನೆ ಪಾಕ್ ಸೇನೆಯ ವಿರುದ್ಧ ಮಿಗ್-27 ಮತ್ತು ಮಿಗ್-29 ಯುದ್ಧವಿಮಾನಗಳನ್ನು ಪ್ರಯೋಗಿಸಿತು. ಜೊತೆಗೆ ಈ ಯುದ್ಧದಲ್ಲಿ ಬೊಫೋರ್ಸ್ ತೋಪುಗಳ ಮುಂದೆ ಪಾಕ್ ಸೇನೆ ಮಂಡಿಯೂರಿತು.
ಜೂನ್ 13 ರಂದು ಭಾರತೀಯ ಸೇನೆ ದ್ರಾಸ್ ಸೆಕ್ಟರ್ ನ ತೋಲೋಲಿಂಗ ಪೋಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸಿತ್ತು. ಟೈಗರ್ ಹಿಲ್ ಮೇಲೆ ಭಾರತೀಯ ಸೇನೆ ಜೂನ್ 24 ರಂದು ತನ್ನ ಆಪರೇಷನ್ ಆರಂಭಿಸಿತ್ತು. ಈ ವೇಳೆ ಭಾರತೀಯ ವಾಯುಸೇನೆ ಮಿರಾಜ್ 2000 ಏರ್ ಕ್ರಾಫ್ಟ್ ಕಳುಹಿಸಿತ್ತು. ಈ ವಿಮಾನಗಳು ಟೈಗರ್ ಹಿಲ್ ಮೇಲೆ ತನ್ನ ಕಬ್ಜಾ ಸಾಧಿಸಿದ್ದ ಪಾಕ್ ಸೈನಿಕರ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಕೊನೆಗೆ ಜುಲೈ 26ರಂದು ಭಾರತ ಈ ಕೊನೆಯ ಹಿಲ್ ಮೇಲೆ ತನ್ನ ಹಿಡಿತ ಸಾಧಿಸಿ, ಆಪರೇಷನ್ ವಿಜಯ್ ಮುಕ್ತಾಯಗೊಂಡಿತು. ಕಾರ್ಗಿಲ್ ನ ಈ ವಿಜಯಕ್ಕೆ ಇಡೀ ದೇಶ ಹೆಮ್ಮೆಪಡುತ್ತದೆ.