ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಮಹತ್ವಾಕಾಂಕ್ಷಿ ಗುರಿಯ ಬೆನ್ನತ್ತಿದೆ ಇಸ್ರೋ

International space station : ಐಎಸ್ಎಸ್ ಇಲ್ಲಿಯವರೆಗೆ ನಿರ್ಮಿಸಲಾದ ಅತ್ಯಂತ ದೊಡ್ಡದಾದ, ಹೆಚ್ಚು ಸಂಕೀರ್ಣವಾದ ಬಾಹ್ಯಾಕಾಶ ನಿಲ್ದಾಣವಾಗಿದೆ. 

Written by - Girish Linganna | Last Updated : Oct 7, 2023, 09:33 AM IST
  • ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂದರೇನು?
  • ಇಸ್ರೋ ಮುಂದಿನ ಯೋಜನೆ ಯಾವುದು?
  • ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗುರಿ!
ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಮಹತ್ವಾಕಾಂಕ್ಷಿ ಗುರಿಯ ಬೆನ್ನತ್ತಿದೆ ಇಸ್ರೋ  title=

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) : ಐಎಸ್ಎಸ್ ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎನ್ನುವುದು ಒಂದು ದೊಡ್ಡ ಬಾಹ್ಯಾಕಾಶ ನೌಕೆಯಾಗಿದ್ದು, 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತದೆ. ಇದು ಐದು ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳಾದ, ಅಮೆರಿಕಾದ ನಾಸಾ, ರಷ್ಯಾದ ರಾಸ್‌ಕಾಸ್ಮೋಸ್, ಜಪಾನಿನ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA), ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಹಾಗೂ ಕೆನೆಡಿಯನ್ ಸ್ಪೇಸ್ ಏಜೆನ್ಸಿ (ಸಿಎಸ್ಎ) ಸಂಸ್ಥೆಗಳ ಜಂಟಿ ಯೋಜನೆಯಾಗಿದೆ.

ಐಎಸ್ಎಸ್ ಇಲ್ಲಿಯವರೆಗೆ ನಿರ್ಮಿಸಲಾದ ಅತ್ಯಂತ ದೊಡ್ಡದಾದ, ಹೆಚ್ಚು ಸಂಕೀರ್ಣವಾದ ಬಾಹ್ಯಾಕಾಶ ನಿಲ್ದಾಣವಾಗಿದೆ. ಇದು 2000ರಿಂದಲೂ ನಿರಂತರವಾಗಿ ಗಗನಯಾತ್ರಿಗಳ ತಾಣವಾಗಿದ್ದು, ಇದು ಏಕಕಾಲದಲ್ಲಿ ಗರಿಷ್ಠ ಏಳು ಗಗನಯಾತ್ರಿಗಳಿಗೆ ಇರಲು ಅವಕಾಶ ಮಾಡಿಕೊಡಬಲ್ಲದು. ಲೋ ಅರ್ತ್ ಆರ್ಬಿಟ್‌ನಲ್ಲಿರುವ  ಐಎಸ್ಎಸ್, ಗಗನಯಾತ್ರಿಗಳು ಮತ್ತು ಕಾಸ್ಮೋನಾಟ್‌ಗಳಿಗೆ ಮನೆ, ಪ್ರಯೋಗಾಲಯದ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಅವರಿಗೆ ವೈಜ್ಞಾನಿಕ ಮತ್ತು ವಾಣಿಜ್ಯಿಕ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಕಲ್ಪಿಸುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಮ್ಮ ಸೌರಮಂಡಲದಲ್ಲಿರುವ ಅತಿದೊಡ್ಡ ಮಾನವ ನಿರ್ಮಿತ ವಸ್ತುವಾಗಿದ್ದು, ಆಕಾಶದಲ್ಲಿ ಚಲಿಸುವ ಪ್ರಕಾಶಮಾನವಾದ ಚುಕ್ಕಿಯಂತೆ ಭೂಮಿಯಿಂದಲೇ ಬರಿಗಣ್ಣಿಗೆ ಕಾಣಿಸುತ್ತದೆ.

ಬಾಹ್ಯಾಕಾಶ ನಿಲ್ದಾಣಗಳ ಇತಿಹಾಸ ಮತ್ತು ಅಭಿವೃದ್ಧಿ

ಇಲ್ಲಿಯತನಕ ನಾಲ್ಕು ರಾಷ್ಟ್ರಗಳು ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸಿ, ಅವುಗಳನ್ನು ಕಾರ್ಯಾಚರಿಸಿವೆ. ಅವೆಂದರೆ: ಚೀನಾ, ರಷ್ಯಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟ.

• ಚೀನಾ ಇಲ್ಲಿಯತನಕ ಟಿಯಾಂಗಾಂಗ್ - 1, ಟಿಯಾಂಗಾಂಗ್-2, ಮತ್ತು ಟಿಯಾಂಗಾಂಗ್ ಎಂಬ ಮೂರು ಬಾಹ್ಯಾಕಾಶ ನಿಲ್ದಾಣಗಳನ್ನು ಉಡಾವಣೆಗೊಳಿಸಿದೆ. ಮೊದಲ ಎರಡು ಮಾದರಿಗಳನ್ನು ಕಕ್ಷೆಯಿಂದ ತೆಗೆದು ಹಾಕಲಾಗಿದ್ದು, ಮೂರನೆಯದು ಇಂದಿಗೂ ಕಾರ್ಯಾಚರಿಸುತ್ತಿದ್ದು, ಮೂವರು ಸಿಬ್ಬಂದಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: Daily GK Quiz: ಜಗತ್ತಿನಲ್ಲಿ ಯಾವ ದೇಶವು ಹೆಚ್ಚು ವಿದ್ಯಾವಂತ ದೇಶವಾಗಿದೆ? 

• ರಷ್ಯಾ (ಹಾಗೂ ಸೋವಿಯತ್ ಒಕ್ಕೂಟ) ಒಟ್ಟು 11 ಬಾಹ್ಯಾಕಾಶ ನಿಲ್ದಾಣಗಳನ್ನು ಉಡಾವಣೆಗೊಳಿಸಿದೆ. ಅವೆಂದರೆ, ಸಾಲ್ಯುತ್ 1ರಿಂದ 7, ಡಿಒಎಸ್-2, ಕಾಸ್ಮೋಸ್ 557, ಮಿರ್ ಹಾಗೂ ಜ್ವೆಜ್ದ. ಇವುಗಳಲ್ಲಿ ಹಲವು ಮಾದರಿಗಳು ಕಕ್ಷೆಯನ್ನು ತಲುಪಲು ವಿಫಲವಾದವು. ಆದರೆ, ಉಳಿದ ಬಾಹ್ಯಾಕಾಶ ನಿಲ್ದಾಣಗಳು ಹಲವು ವರ್ಷಗಳ ಕಾಲ ಕಾರ್ಯಾಚರಿಸಿದ್ದವು. ಜ್ವೆಜ್ದ ಇಂದಿಗೂ ಕಕ್ಷೆಯಲ್ಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಭಾಗವಾಗಿದೆ.

• ಅಮೆರಿಕಾ ಎರಡು ಬಾಹ್ಯಾಕಾಶ ನಿಲ್ದಾಣಗಳನ್ನು ಉಡಾವಣೆಗೊಳಿಸಿದೆ. ಅವೆಂದರೆ: ಸ್ಕೈಲ್ಯಾಬ್ ಮತ್ತು ಫ್ರೀಡಮ್. ಸ್ಕೈಲ್ಯಾಬ್ 1973ರಿಂದ 1979ರ ತನಕ ಕಾರ್ಯಾಚರಣೆ ನಡೆಸಿತ್ತು. ಫ್ರೀಡಮ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಭಾಗವಾಗಿತ್ತು.

ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಇರುವ ಸವಾಲುಗಳು

• ಬಾಹ್ಯಾಕಾಶದಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಬೇಕಾದ ಮಾಡ್ಯುಲ್‌ಗಳು ಮತ್ತು ಬಿಡಿಭಾಗಗಳನ್ನು ಜೋಡಿಸುವುದು ಮತ್ತು ಉಡಾವಣೆಗೊಳಿಸುವುದು ಒಂದು ಮಹತ್ತರ ಸವಾಲಾಗಿದೆ. ಯಾಕೆಂದರೆ, ಇದಕ್ಕೆ ಅತ್ಯಂತ ನಿಖರ ಸಂಚರಣೆ (ನ್ಯಾವಿಗೇಶನ್) ಮತ್ತು ಸಮನ್ವಯದ ಅವಶ್ಯಕತೆ ಇರುತ್ತದೆ.

• ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಸಿಬ್ಬಂದಿಗಳು ಮತ್ತು ಪ್ರಯೋಗಗಳಿಗೆ ಸುರಕ್ಷಿತ ಮತ್ತು ಆರಾಮದಾಯಕ ವಾತಾವರಣವನ್ನು ಕಲ್ಪಿಸುವುದು ಸವಾಲಾಗಿದೆ. ಇದರಲ್ಲಿ ವಾತಾವರಣ, ಆಮ್ಲಜನಕ, ನೀರು, ವಿದ್ಯುತ್ ಶಕ್ತಿ, ಸಂವಹನ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ನಿರ್ವಹಿಸುವುದು ಪ್ರಮುಖವಾಗಿವೆ. ಅದರೊಡನೆ, ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಿಬ್ಬಂದಿಗಳು ಸೂಕ್ಷ್ಮ ಗುರುತ್ವ, ಏಕಾಂಗಿತನ ಮತ್ತು ವಿಕಿರಣಗಳಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

• ಬಾಹ್ಯಾಕಾಶ ನಿಲ್ದಾಣವನ್ನು ಅದರ ಉದ್ದೇಶಿತ ಗುರಿಗಳಾದ ವೈಜ್ಞಾನಿಕ ಸಂಶೋಧನೆಗಳು, ವಾಣಿಜ್ಯಿಕ ಚಟುವಟಿಕೆಗಳು, ಶಿಕ್ಷಣ ಹಾಗೂ ಅಂತಾರಾಷ್ಟ್ರೀಯ ಸಹಕಾರಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳುವುದು ಸವಾಲಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಇದರಲ್ಲಿ ಪ್ರಯೋಗಗಳನ್ನು ನಡೆಸಲು ಮತ್ತು ವಿವಿಧ ಕ್ಷೇತ್ರಗಳ ಕಾರ್ಯಾಚರಣೆ ನಡೆಸಲು ವಿವಿಧ ಉಪಕರಣಗಳು, ವ್ಯಕ್ತಿಗಳ ಅವಶ್ಯಕತೆ ಇರುತ್ತದೆ.

• ಬಾಹ್ಯಾಕಾಶ ನಿಲ್ದಾಣವನ್ನು ಬಾಹ್ಯಾಕಾಶ ಅಪಾಯಗಳಾದ ಬಾಹ್ಯಾಕಾಶ ಅವಶೇಷಗಳು, ಕ್ಷುದ್ರಗ್ರಹಗಳು, ಅಥವಾ ದುರುದ್ದೇಶಪೂರಿತ ದಾಳಿಗಳು, ಡಿಕ್ಕಿ ಅಥವಾ ಹಾನಿಗಳಿಂದ ಕಾಪಾಡಿಕೊಳ್ಳುವುದು ಸಹ ಸವಾಲಾಗಿದೆ. ಬಾಹ್ಯಾಕಾಶ ನಿಲ್ದಾಣಗಳು ಅಪಘಾತ ಅಥವಾ ವೈಫಲ್ಯದಂತಹ ಸಂದರ್ಭದಲ್ಲಿ ಸೂಕ್ತ ಪರಿಹಾರ ಉಪಾಯಗಳು ಮತ್ತು ತುರ್ತು ಕ್ರಮಗಳನ್ನು ಹೊಂದಿರಬೇಕಾಗುತ್ತದೆ.

ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ತಗಲುವ ವೆಚ್ಚ

ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕೆ ಹಲವು ವರ್ಷಗಳು ಮತ್ತು ದಶಕದ ಕಾಲ ಹತ್ತರಿಂದ ನೂರಾರು ಬಿಲಿಯನ್ ಡಾಲರ್ ಹಣ ಬೇಕಾಗುತ್ತದೆ. ಈ ವೆಚ್ಚದ ಮೊತ್ತವನ್ನು ನೇರ ಮತ್ತು ಪರೋಕ್ಷ ವೆಚ್ಚ ಎಂದು ವಿಭಜಿಸಬಹುದು. ನೇರ ವೆಚ್ಚಗಳು ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಮಾಡುವ ವೆಚ್ಚಗಳಾಗಿವೆ. ಅವೆಂದರೆ:

ಉಡಾವಣಾ ವೆಚ್ಚ: ಮಾಡ್ಯುಲ್‌ಗಳನ್ನು ಹೊತ್ತ ರಾಕೆಟ್‌ಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ, ಕಕ್ಷೆಗೆ ತಲುಪಿಸಲು ತಗಲುವ ವೆಚ್ಚ. ಉಡಾವಣಾ ವೆಚ್ಚ ಸಾಮಾನ್ಯವಾಗಿ ಬಾಹ್ಯಾಕಾಶ ನೌಕೆ, ರಾಕೆಟ್‌ಗಳ ವಿಧ, ಗಾತ್ರ ಮತ್ತು ಸಂಖ್ಯೆಗಳನ್ನು ಅವಲಂಬಿಸಿರುತ್ತದೆ. ಅದರೊಡನೆ ಉಡಾವಣಾ ಸೇವೆಯನ್ನು ಒದಗಿಸುವವರ ವೆಚ್ಚವೂ ತಗಲುತ್ತದೆ.

ಜೋಡಣಾ ವೆಚ್ಚ: ಇದು ಬಾಹ್ಯಾಕಾಶ ನಿಲ್ದಾಣದ ಮಾಡ್ಯುಲ್‌ಗಳು ಮತ್ತು ಬಿಡಿಭಾಗಗಳನ್ನು ಕಕ್ಷೆಗೆ ಜೋಡಿಸುವ ವೆಚ್ಚವಾಗಿದೆ. ಜೋಡಣಾ ವೆಚ್ಚದಲ್ಲಿ ಕಾರ್ಮಿಕ ವೆಚ್ಚ, ಜೋಡಣಾ ಪ್ರಕ್ರಿಯೆಗೆ ಬೇಕಾಗುವ ಉಪಕರಣಗಳು ಮತ್ತು ವಸ್ತುಗಳ ವೆಚ್ಚವೂ ಒಳಗೊಂಡಿರುತ್ತದೆ.

ನಿರ್ವಹಣಾ ವೆಚ್ಚ: ಬಾಹ್ಯಾಕಾಶ ನಿಲ್ದಾಣವನ್ನು ಸುರಕ್ಷಿತವಾಗಿ ಮತ್ತು ಕಾರ್ಯಾಚರಿಸುವ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ತಗಲುವ ವೆಚ್ಚವನ್ನು ನಿರ್ವಹಣಾ ವೆಚ್ಚ ಎನ್ನಲಾಗುತ್ತದೆ. ಇದು ಬಾಹ್ಯಾಕಾಶ ನಿಲ್ದಾಣದ ದುರಸ್ತಿ, ಅದರ ವ್ಯವಸ್ಥೆಗಳ ಮೇಲ್ದರ್ಜೆಗೇರಿಸುವಿಕೆ ಮತ್ತು ಬದಲಾಯಿಸುವಿಕೆಗಳನ್ನು ಒಳಗೊಂಡಿರುತ್ತದೆ. ನಿರ್ವಹಣಾ ವೆಚ್ಚದಲ್ಲಿ ನಿರ್ವಹಣಾ ಕಾರ್ಯದಲ್ಲಿ ತಗಲುವ ಕಾರ್ಮಿಕರ ವೆಚ್ಚ, ಉಪಕರಣಗಳು, ಹಾಗೂ ವಸ್ತುಗಳ ಮೊತ್ತ ಸೇರಿರುತ್ತದೆ.

ಇದನ್ನೂ ಓದಿ : Survey Report: ಮತ್ತೆ ಮೋದಿಯೇ ಪ್ರಧಾನಿಯಾಗಲಿ ಎಂದ ಶೇ.61ರಷ್ಟು ಮತದಾರರು..! 

ಇನ್ನು ಪರೋಕ್ಷ ವೆಚ್ಚದಲ್ಲಿ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿರದ ವೆಚ್ಚ ಸೇರಿರುತ್ತದೆ. ಆದರೂ ಈ ವೆಚ್ಚಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಅವಶ್ಯಕವಾಗಿರುತ್ತದೆ. ಇದು ಒಳಗೊಳ್ಳುವ ವೆಚ್ಚಗಳೆಂದರೆ:

ಅಭಿವೃದ್ಧಿ ವೆಚ್ಚ: ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ತಗಲುವ ವೆಚ್ಚ, ಇಂಜಿನಿಯರಿಂಗ್, ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ತಗಲುವ ಸಹಕಾರಗಳ ವೆಚ್ಚವನ್ನು ಒಳಗೊಂಡಿದೆ. ಅಭಿವೃದ್ಧಿ ವೆಚ್ಚದಲ್ಲಿ ಬಾಹ್ಯಾಕಾಶ ನಿಲ್ದಾಣ ಮತ್ತು ಅದರ ಬಿಡಿಭಾಗಗಳ ನಿರ್ಮಾಣ ಯೋಜನೆಗಳು ಮತ್ತು ಮೂಲ ಮಾದರಿಗಳ ಸಂಶೋಧನೆ, ವಿನ್ಯಾಸ, ಪರೀಕ್ಷೆ ಮತ್ತು ಮೌಲ್ಯಮಾಪನದ ವೆಚ್ಚಗಳು ಒಳಗೊಂಡಿರುತ್ತದೆ.

ಅವಕಾಶ ವೆಚ್ಚಗಳು: ಬಾಹ್ಯಾಕಾಶ ನಿಲ್ದಾಣವನ್ನು ಇತರ ಬದಲಿ ಆಯ್ಕೆಗಳ ಬದಲಿಗೆ ಆರಿಸುವುದಕ್ಕೆ ತಗಲುವ ವೆಚ್ಚವನ್ನು ಅವಕಾಶ ವೆಚ್ಚ ಎನ್ನಲಾಗುತ್ತದೆ. ಇದರಲ್ಲಿ, ಬಾಹ್ಯಾಕಾಶ ನಿಲ್ದಾಣದ ಬದಲು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಳಿಸಬಹುದಾಗಿದ್ದ ಪ್ರಯೋಜನದ ಮೊತ್ತವೂ ತಗಲುತ್ತದೆ.

ಸಾಮಾಜಿಕ ವೆಚ್ಚಗಳು: ಇದು ಒಂದು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವುದರಿಂದ ಜನರ ಜೀವನಮಟ್ಟ, ಆರೋಗ್ಯ, ಸಂಸ್ಕೃತಿ, ಮೌಲ್ಯಗಳು, ನೈತಿಕತೆ, ರಾಜಕಾರಣ, ಮತ್ತು ಭದ್ರತೆಗಳ ಮೇಲೆ ಬೀರುವ ಪರಿಣಾಮಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಭೂಮಿಯ ಸಂಪನ್ಮೂಲಗಳು, ವಾತಾವರಣ, ಜೀವವೈವಿಧ್ಯ ಮತ್ತು ಸುಸ್ಥಿರತೆಗಳ ಮೇಲೆ ಬೀರುವ ಪರಿಣಾಮದ ವೆಚ್ಚವೂ ಸೇರಿದೆ.

ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ

ಇಸ್ರೋ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಅನ್ನು ಭಾರತ ನಿರ್ಮಿಸಲಿದ್ದು, ಇದನ್ನು ಇಸ್ರೋ ನಿರ್ವಹಿಸಲಿದೆ. ಈ ಬಾಹ್ಯಾಕಾಶ ನಿಲ್ದಾಣ 20 ಟನ್ ಭಾರ ಹೊಂದಿದ್ದು, ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಯಲ್ಲಿದ್ದು, 15-20 ದಿನಗಳ ಕಾಲ ಗಗನಯಾತ್ರಿಗಳು ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಬಾಹ್ಯಾಕಾಶ ನಿಲ್ದಾಣ 2035ರ ವೇಳೆಗೆ ಉಡಾವಣೆಗೆ ಸಿದ್ಧಗೊಳ್ಳುವ ಸಾಧ್ಯತೆಗಳಿವೆ.

ಲೇಖಕರು : ಗಿರೀಶ್ ಲಿಂಗಣ್ಣ ( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News