ನವದೆಹಲಿ: ಮುಂಬರುವ ದಿನಗಳಲ್ಲಿ ಭಾರತವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ನೀತಿ ಯೋಗದ ವರದಿಯಲ್ಲಿ 2020ಕ್ಕೆ ಭಾರತದ ಪ್ರಮುಖ ನಗರಗಳ ಅಂತರ್ಜಲದ ಪ್ರಮಾಣವು ಬತ್ತಿಹೊಗಲಿದ್ದು, 2030 ರ ವೇಳೆಗೆ ನೀರಿನ ಬೇಡಿಕೆಯು ದ್ವಿಗುಣಗೊಳ್ಳಲಿದೆ ಎನ್ನಲಾಗುತ್ತಿದೆ.ಇದರಿಂದ ಸುಮಾರು 600 ಮಿಲಿಯನ್ ಭಾರತೀಯರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿವರ್ಷ ಶುದ್ದ ನೀರಿನ ಕೊರತೆಯಿಂದಾಗಿ ಎರಡು ಲಕ್ಷಕ್ಕೂ ಅಧಿಕ ಜನರು ಮೃತಪಡುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ವರದಿ ತಿಳಿಸಿದೆ. ಕರ್ನಾಟಕ ಮಹಾರಾಷ್ಟ್ರ,ಆಂದ್ರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಈಗಾಗಲೇ ನೀರಾವರಿ, ಕುಡಿಯುವ ನೀರಿನ ಯೋಜನೆ ಹಾಗೂ ಅಂತರ್ಜಾಲದ ಹೆಚ್ಚಳಕ್ಕಾಗಿ ಕ್ರಮವನ್ನು ತೆಗೆದುಕೊಂಡಿವೆ. ಆದರೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಾದ ಉತ್ತರಪ್ರದೇಶ, ಹರ್ಯಾಣ, ಬಿಹಾರ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ.
ಅಷ್ಟಕ್ಕೂ ಈಗ ನೀರಿನ ಕೊರತೆ ಕೇವಲ ಭಾರತದ ಸಮಸ್ಯೆ ಅಷ್ಟೇ ಅಲ್ಲ ಬದಲಾಗಿ ಅದು ಜಾಗತಿಕ ಸಮಸ್ಯೆಯಾಗಿದೆ.ಇತ್ತೀಚಿಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಸಂಪೂರ್ಣ ಪ್ರಮಾಣದ ನೀರಿನ ಕೊರತೆ ಅನುಭವಿಸಿದ ನಗರ ಎಂದು ಸುದ್ದಿಯಾಗಿತ್ತು.