ನವದೆಹಲಿ: ಫೇರ್ & ಲವ್ಲಿ ಶೀಘ್ರದಲ್ಲೇ ಗ್ಲೋ & ಲವ್ಲಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಎಚ್‌ಯುಎಲ್-ಹಿಂದೂಸ್ತಾನ್ ಯೂನಿಲಿವರ್ ತನ್ನ ಪ್ರಸಿದ್ಧ ಬ್ರಾಂಡ್ ಹೆಸರನ್ನು ಕೈಬಿಟ್ಟು ಇದೀಗ 'ಗ್ಲೋ ಅಂಡ್ ಲವ್ಲಿ' ಅನ್ನು ತನ್ನ ಟ್ರೇಡ್‌ಮಾರ್ಕ್ ಆಗಿ ಸ್ವೀಕರಿಸಿದೆ. ಫೇರ್ ಮತ್ತು ಲವ್ಲಿ ಕ್ರೀಮ್ ಉತ್ಪನ್ನದಿಂದ 'ಫೇರ್' ಪದವನ್ನು ತೆಗೆದುಹಾಕಲು ಕಂಪನಿ ನಿರ್ಧರಿಸಿದೆ. ಹೀಗಾಗಿ ಫೇಮಸ್ ಫೇರ್ನೆಸ್ ಕ್ರೀಮ್ ಫೇರ್ & ಲವ್ಲಿ ಇದೀಗ ಬದಲಾಗಿದೆ.
ಈ ಕ್ರೀಮ್ ತಯಾರಕ ಕಂಪನಿ ಹಿಂದೂಸ್ತಾನ್ ಯೂನಿಲಿವರ್ ಇದೀಗ ತನ್ನ ಕ್ರೀಂ ಹೆಸರನ್ನು ಹೆಸರನ್ನು ಗ್ಲೋ & ಲವ್ಲಿ ಎಂದು ಬದಲಾಯಿಸಲು ನಿರ್ಧರಿಸಿದೆ. ಗುರುವಾರ, ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದೆ. ಈ ಕ್ರೀಮ್‌ನ ಪುರುಷ ಆವೃತ್ತಿಯನ್ನು ಗ್ಲೋ & ಹ್ಯಾಂಡ್‌ಸಮ್ ಎಂದು ಹೆಸರಿಸಲಾಗುವುದು ಎಂದು ಹಿಂದೂಸ್ತಾನ್ ಯೂನಿಲಿವರ್ ಹೇಳಿದೆ.
ಕಂಪನಿಯ ನೀಡಿರುವ ಮಾಹಿತಿ ಪ್ರಕಾರ, ಹೊಸ ಹೆಸರಿನ ಉತ್ಪನ್ನಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಪುರುಷರಿಗಾಗಿ ಪ್ರಾರಂಭಿಸಲಾದ ಉತ್ಪನ್ನಗಳು ಈಗ ಗ್ಲೋ & ಹ್ಯಾಂಡ್ಸಮ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ. ಕಂಪನಿ ತನ್ನ ಈ ಉತ್ಪನ್ನಗಳ ಹೊಸ ಹೆಸರುಗಳಿಗೆ ಅನುಮೋದನೆ ಕೂಡ ಪಡೆದಿದೆ ಎಂದು ಹೇಳಿದೆ.
ಹೊಸ ಹೆಸರು 'Glow & Lovely'
ಬಹುರಾಷ್ಟ್ರೀಯ ಕಂಪನಿ 'ಯೂನಿಲಿವರ್ ಪಿಎಲ್‌ಸಿ'ಯ ಅಂಗಸಂಸ್ಥೆಯಾದ ಯೂನಿಲಿವರ್ ತನ್ನ 'ಫೇರ್ ಅಂಡ್ ಲವ್ಲಿ' ಉತ್ಪನ್ನಕ್ಕೆ ಹೊಸ ಹೆಸರನ್ನು ಘೋಷಿಸಿದೆ. 17 ಜೂನ್ 2020 ರಂದು ಕಂಪನಿಯು 'ಗ್ಲೋ ಮತ್ತು ಲವ್ಲಿ' ಹೆಸರನ್ನು ನೋಂದಾಯಿಸಲು 'ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ ಡಿಸೈನ್ ಮತ್ತು ಟ್ರೇಡ್‌ಮಾರ್ಕ್'ಗೆ ಅರ್ಜಿ ಸಲ್ಲಿಸಿತ್ತು. ಯಾವುದೇ ಬ್ರಾಂಡ್‌ಗೆ ಟ್ರೇಡ್‌ಮಾರ್ಕ್ ರಕ್ಷಣೆ ಒಂದು ಪ್ರಮುಖ ಅಂಶವಾಗಿದೆ ಎಂದು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ವಕ್ತಾರರು ತಿಳಿಸಿದ್ದಾರೆ.
ಹೆಸರು ಬದಲಾವಣೆಗೆ ಕಾರಣ ಏನು?
ಜನಾಂಗೀಯ ತಾರತಮ್ಯದ ವಿರುದ್ಧ ವಿಶ್ವಾದ್ಯಂತ ಕೇಳಿಬರುತ್ತಿರುವ ಕೂಗುಗಳ ಮಧ್ಯೆ ಕಂಪನಿಯ ಈ ಈ ನಿರ್ಧಾರ ಕೈಗೊಂಡಿದೆ. ಆದರೆ, ಈ ಕ್ರಮಕ್ಕೆ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ವಿರೋಧಿ ಆಂದೋಲನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ಹೇಳಿದೆ. ತನ್ನ ಬ್ರಾಂಡ್‌ನ ಎರಡು ಸಾವಿರ ಕೋಟಿ ರೂ. ಮೌಲ್ಯ ಹೊಂದಿರುವ ತನ್ನ ಬ್ರಾಂಡ್ ನಲ್ಲಿ ಸುಧಾರಣೆ ತರಲು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದಿದೆ. ಚರ್ಮದ ಆರೈಕೆಗೆ ಸಂಬಂಧಿಸಿದ ತನ್ನ ಇತರೆ ಉತ್ಪನ್ನಗಳ ಸಂದರ್ಭದಲ್ಲಿ, ಹೊಸ ದೃಷ್ಟಿಕೋನವನ್ನು ಅನುಸರಿಸಲಾಗುವುದು. ಇದರಲ್ಲಿ ಪ್ರತಿ ವರ್ಣದ ಕುರಿತು ಕೂಡ ಕಾಳಜಿ ವಹಿಸಲಾಗುವುದು ಎಂದು ಕಂಪನಿ ಹೇಳಿದೆ.