Gulab Cyclone: ಆಂಧ್ರಪ್ರದೇಶ, ಒಡಿಶಾದಲ್ಲಿ 3 ಸಾವು, ಸಾವಿರಾರು ಜನರ ಸ್ಥಳಾಂತರ

Gulab Cyclone: ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದು, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ.

Written by - Yashaswini V | Last Updated : Sep 27, 2021, 07:16 AM IST
  • ಗುಲಾಬ್ ಚಂಡಮಾರುತವು ಎರಡು ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಭಾನುವಾರ ಸಂಜೆ ಅಪ್ಪಳಿಸಿದ ಕಾರಣ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ
  • ಶ್ರೀಕಾಕುಳಂ ಜಿಲ್ಲೆಯಲ್ಲಿ 1358 ಜನರನ್ನು ವಜ್ರಪುಕೋಟೂರು ಮಂಡಲದಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಲೆಕ್ಟರ್ ಎಲ್ ಶ್ರೀಕೇಶ್ ಬಾಲಾಜಿ ರಾವ್ ತಿಳಿಸಿದ್ದಾರೆ
  • ಏತನ್ಮಧ್ಯೆ, ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ವಿಜಯವಾಡ-ಹೌರಾ ಮಾರ್ಗದ
Gulab Cyclone: ಆಂಧ್ರಪ್ರದೇಶ, ಒಡಿಶಾದಲ್ಲಿ 3 ಸಾವು, ಸಾವಿರಾರು ಜನರ ಸ್ಥಳಾಂತರ title=
ಸಾಂದರ್ಭಿಕ ಚಿತ್ರ

ವಿಶಾಖಪಟ್ಟಣಂ: ಗುಲಾಬ್ ಚಂಡಮಾರುತವು ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯನ್ನು ದಾಟಿದೆ. ಗುಲಾಬ್ ಚಂಡಮಾರುತವು ಎರಡು ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಭಾನುವಾರ ಸಂಜೆ ಅಪ್ಪಳಿಸಿದ ಕಾರಣ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ ಕಳಿಂಗಪಟ್ಟಣದಿಂದ 20 ಕಿಮೀ ಉತ್ತರಕ್ಕೆ 75 ರಿಂದ 85 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಸಾವಿರಾರು ಜನರನ್ನು ಸುರಕ್ಷತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಭಾನುವಾರ ಸಂಜೆ ಗುಲಾಬ್ ಚಂಡಮಾರುತ (Gulab Cyclone) ಅಪ್ಪಳಿಸಿದ ಕಾರಣ, ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದು, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದು,ಇನ್ನೊಬ್ಬ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಜೆನಾ ಮಾತನಾಡಿ, ರಾತ್ರಿ 8.30 ಕ್ಕೆ ಭೂಕುಸಿತ ಉಂಟಾದ ನಂತರ, ಚಂಡಮಾರುತವು ಕೋರಾಪುಟ್ ಮತ್ತು ಮಲ್ಕನಗಿರಿ ಜಿಲ್ಲೆಗಳತ್ತ ಚಲಿಸುತ್ತಿದ್ದು, ಅಲ್ಲಿ ಗಾಳಿ ಮತ್ತು ಮಳೆಯಿಂದ ಸಂಭಾವ್ಯ ಹಾನಿಯುಂಟಾಗುವ ನಿರೀಕ್ಷೆಯಿದೆ. ನಾವು ಸೋಮವಾರ (ಸೆ.27) ಮಧ್ಯಾಹ್ನದವರೆಗೆ ಮಲ್ಕನಗಿರಿ, ಕೊರಪುಟ್, ಗಂಜಮ್, ಗಜಪತಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಬೇರೆ ಯಾವುದೇ ಕರಾವಳಿ ಜಿಲ್ಲೆಗಳಿಗೆ ಯಾವುದೇ ಅಪಾಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- ನೂತನ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಚಂಡಮಾರುತದ ಪ್ರಭಾವದಿಂದಾಗಿ ಗಂಜಮ್ ಜಿಲ್ಲೆಯಲ್ಲಿ (Odisha’s Ganjam district), ಗೋಸನಿನುಗಾಂವ್ ಬ್ಲಾಕ್‌ನಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ. ಮಲ್ಕಂಗಿರಿ ಜಿಲ್ಲೆಯ ಖಾರ್‌ಪುಟ್ ಬ್ಲಾಕ್‌ನಲ್ಲಿರುವ ಒಂದು ಕುಟುಂಬದ ಮೂವರು ತಮ್ಮ ಮನೆಯ ಮೇಲೆ ಬಿದ್ದ ಮರದ ಕೆಳಗೆ ಬಿದ್ದು ಸ್ವಲ್ಪವೇ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಗುಲಾಬ್ ಚಂಡಮಾರುತದ ಪ್ರಭಾವ:
ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂನಲ್ಲಿ, ಬಲವಾದ ಅಲೆಗಳಿಂದ ಮಂಡಸ ಕರಾವಳಿಯಲ್ಲಿ ಸಮುದ್ರದಲ್ಲಿ ದೋಣಿಯಲ್ಲಿದ್ದ ಆರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ. ಮೂವರು ಸುರಕ್ಷಿತವಾಗಿ ತೀರಕ್ಕೆ ಬಂದು ಸೇರಿದ್ದಾರೆ ಮತ್ತು ಒಬ್ಬ ಮೀನುಗಾರ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಜನರಲ್ಲಿ ಒಬ್ಬರು ತಮ್ಮ ಹಳ್ಳಿಗೆ ದೂರವಾಣಿ ಮೂಲಕ ಕರೆ ಮಾಡಿದ್ದು, ತಮ್ಮ ದೋಣಿ ಸಮತೋಲನ ಕಳೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ತರುವಾಯ, ಅವರ ಮೊಬೈಲ್ ಫೋನ್ ಕೂಡ ಕನೆಕ್ಟ್ ಆಗುತ್ತಿರಲಿಲ್ಲ. 
ಆಂಧ್ರಪ್ರದೇಶದ ಮೀನುಗಾರಿಕಾ ಸಚಿವರು ನೌಕಾಪಡೆಯ ಅಧಿಕಾರಿಗಳನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ತಿಳಿದುಬಂದಿದೆ.

ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಲಂನ ಮೂರು ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತದ  (Gulab Cyclone) ಪ್ರಭಾವದಿಂದ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ.

ಇದನ್ನೂ ಓದಿ- Bharat Bandh: ಇಂದು ರೈತರಿಂದ ಭಾರತ್ ಬಂದ್; ನಾವು 10 ವರ್ಷಗಳ ಕಾಲ ಪ್ರತಿಭಟನೆ ಮಾಡಲು ಸಿದ್ಧರಿದ್ದೇವೆ ಎಂದ ರಾಕೇಶ್ ಟಿಕೈಟ್

ಈ ಮಧ್ಯೆ, ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಕೆ ಕಣ್ಣಾ ಬಾಬು ಅವರು ವಿಶಾಖಪಟ್ಟಣಂನ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿ, ಅವರಿಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡುವಂತೆ ಸೂಚಿಸಿದರು.

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮೂರು ಉತ್ತರ ಕರಾವಳಿ ಜಿಲ್ಲೆಗಳಲ್ಲಿ NDRF ಮತ್ತು SDRF ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಶ್ರೀಕಾಕುಳಂ ಜಿಲ್ಲೆಯಲ್ಲಿ 1358 ಜನರನ್ನು ವಜ್ರಪುಕೋಟೂರು ಮಂಡಲದಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಲೆಕ್ಟರ್ ಎಲ್ ಶ್ರೀಕೇಶ್ ಬಾಲಾಜಿ ರಾವ್ ತಿಳಿಸಿದ್ದಾರೆ. 

ಚಂಡಮಾರುತವು (Cyclone) ಭೂಕುಸಿತವಾಗುವ ಮೊದಲು, ಒಡಿಶಾದ ಗಂಜಾಂ ಮತ್ತು ಗಜಪತಿ ಜಿಲ್ಲೆಯಲ್ಲಿ ಸುಮಾರು 39,000 ಜನರನ್ನು ಜಿಲ್ಲೆಗಳಿಂದ ಸ್ಥಳಾಂತರಿಸಲಾಗಿತ್ತು. ತುಲನಾತ್ಮಕವಾಗಿ ಕಡಿಮೆ ಗಾಳಿಯ ವೇಗ ಮತ್ತು ಮಳೆ ಇರುವುದರಿಂದ ಜನರು ಸ್ಥಳಾಂತರಿಸುವ ಪ್ರಕ್ರಿಯೆಗೆ ಆಸಕ್ತಿ ತೋರಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಜಪತಿ ಜಿಲ್ಲೆಯಲ್ಲಿ, ಪರ್ವತವೊಂದರಲ್ಲಿ ಭೂಕುಸಿತ ಉಂಟಾಗಿ ರಸ್ತೆಯನ್ನು ಮುಚ್ಚಲಾಗಿದೆ.

ಗುಲಾಬ್ ಚಂಡಮಾರುತದಿಂದಾಗಿ ಪೂರ್ವ ಕರಾವಳಿ ರೈಲ್ವೆ 34 ಜೋಡಿ ರೈಲುಗಳನ್ನು ರದ್ದು ಮಾಡಿದೆ. ECoR ಕೂಡ 13 ರೈಲುಗಳ ವೇಳಾಪಟ್ಟಿಯನ್ನು ಬದಲಿಸಿದೆ ಮತ್ತು ಕನಿಷ್ಠ 17 ರೈಲುಗಳನ್ನು ಬೇರೆಡೆಗೆ ತಿರುಗಿಸಿದೆ ಎಂದು ತಿಳಿದುಬಂದಿದೆ. 

ಏತನ್ಮಧ್ಯೆ, ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ವಿಜಯವಾಡ-ಹೌರಾ ಮಾರ್ಗದ ಎಂಟು ರೈಲುಗಳನ್ನು ಖರಗ್‌ಪುರ, ಜಾರ್ಸುಗುಡ, ಬಿಲಾಸ್‌ಪುರ ಮತ್ತು ಬಲ್‌ಹರ್ಷಾ ಮೂಲಕ ತಿರುಗಿಸಲಾಗಿದೆ. ಭಾನುವಾರ ಪ್ರಯಾಣ ಆರಂಭಿಸಬೇಕಿದ್ದ ಇತರ ಎರಡು ರೈಲುಗಳನ್ನು ಸೋಮವಾರಕ್ಕೆ ಮರು ನಿಗದಿಗೊಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News