ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಈಗ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಅಖಂಡ ಭಾರತದ ಭಾಗವಾಗಿಸುವುದರ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಸರ್ಕಾರದ ಮುಂದಿನ ಹಂತವೆಂದರೆ ಪಿಒಕೆ ಅನ್ನು ಭಾರತದ ಅಡಿಯಲ್ಲಿ ತರುವುದು ಎಂಬ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಹೇಳಿಕೆಗೆ ಜನರಲ್ ಬಿಪಿನ್ ರಾವತ್ ಈ ಪ್ರತಿಕ್ರಿಯೆ ನೀಡಿದ್ದಾರೆ.
'ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ, ಯಾವ ರೀತಿ ಸರ್ಕಾರವು ಸೂಚನೆಗಳನ್ನು ನೀಡುತ್ತದೆಯೋ. ಆ ರೀತಿಯಲ್ಲಿ ದೇಶದಲ್ಲಿರುವ ಇತರ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ. ಸೇನೆಯು ಸದಾ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ' ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸೇನಾ ಮುಖ್ಯಸ್ಥರು, 'ಜಮ್ಮು ಮತ್ತು ಕಾಶ್ಮೀರದ ಜನರು ರಾಜ್ಯದಲ್ಲಿ ಭದ್ರತೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭದ್ರತೆ ಮತ್ತು ಆಡಳಿತಕ್ಕೆ ಅವಕಾಶ ನೀಡಬೇಕೆಂದು ನಾವು ಬಯಸುತ್ತೇವೆ. ಈ ರಾಜ್ಯಗಳು ಹಲವು ವರ್ಷಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತಿವೆ. ಈಗ ನಮಗೆ ಒಂದು ಅವಕಾಶ ನೀಡಿ, ಅವರಿಗೆ ಯಾವುದು ಒಳ್ಳೆಯದು ಎಂಬುದನ್ನು ಅರ್ಥಮಾಡಿಸುತ್ತೇವೆ ಎಂದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 'ನಮ್ಮ ಮುಂದಿನ ಕಾರ್ಯಸೂಚಿ ಪಿಒಕೆ ಅನ್ನು ಪುನಃ ಪಡೆದುಕೊಳ್ಳುವುದು ಮತ್ತು ಅದನ್ನು ಜಮ್ಮು ಕಾಶ್ಮೀರದ ಅಡಿಯಲ್ಲಿ ತರುವುದು ಎಂದು ಹೇಳಿದ್ದಾರೆ. ಇದು ನಾನು ಅಥವಾ ನನ್ನ ಪಕ್ಷ ಮಾತ್ರವಲ್ಲ, 1994 ರಲ್ಲಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.