ನವದೆಹಲಿ: ಬಾಕಿ ಇರುವ 5 ಲಕ್ಷ ರೂ.ಗಳವರೆಗಿನ ತೆರಿಗೆ ಮೊತ್ತವನ್ನು ತೆರಿಗೆ ಪಾವತಿದಾರರಿಗೆ ತಕ್ಷಣ ಹಿಂದಿರುಗಿಸುವುದಾಗಿ ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಿಂದ ಸುಮಾರು 14 ಲಕ್ಷ ತೆರಿಗೆ ಪಾವತಿದಾರರು ಪ್ರಯೋಜನ ಪಡೆಯಲಿದ್ದಾರೆ. ಕರೋನಾ ವೈರಸ್‌ನಿಂದ ಉದ್ಭವಿಸಿರುವ ಪರಿಸ್ಥಿತಿ ಮತ್ತು ವ್ಯಾಪಾರ ಘಟಕಗಳಿಗೆ ತಕ್ಷಣದ ಪರಿಹಾರ ನೀಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದಾರೆ.
ಇದಲ್ಲದೆ ಕೇಂದ್ರ ಸರ್ಕಾರ ಬಾಕಿ ಇರುವ 18,000 ಕೋಟಿ ರೂ. GST (ಸರಕು ಮತ್ತು ಸೇವಾ ತೆರಿಗೆ) ಹಾಗೂ ಕಸ್ಟಮ್ ತೆರಿಗೆಯನ್ನು ಶೀಘ್ರವೇ ಮರುಪಾವತಿಸಲಿದ್ದು, ಇದರಿಂದ ವ್ಯಾಪಾರಿ ಘಟಗಗಳಿಗೆ ಪರಿಹಾರ ಸಿಗಲಿದೆ.
ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಯೊಬ್ಬರು, "ಕೊರೊನಾ ವೈರಸ್ ನಿಂದ ಉದ್ಭವಿಸಿರುವ ಸ್ಥಿತಿ ಹಾಗೂ ವಾಪಾರಿ ಘಟಕಗಳಿಗೆ ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ 5 ಲಕ್ಷ ರೂ. ವರೆಗೆ ಬಾಕಿ ಇರುವ ತೆರಿಗೆ ಮೊತ್ತವನ್ನು ಶೀಘ್ರವೇ ಮರುಪಾವತಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಸುಮಾರು 14 ಲಕ್ಷ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗಲಿದೆ "ಎಂದು ಹೇಳಿದ್ದಾರೆ.
ಬಾಕಿ ಇರುವ ಜಿಎಸ್‌ಟಿ ಮತ್ತು ಕಸ್ಟಮ್ಸ್ ಸುಂಕವನ್ನು ಸಹ ಮರುಪಾವತಿಸಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಸೇರಿದಂತೆ ಸುಮಾರು ಒಂದು ಲಕ್ಷ ವ್ಯಾಪಾರ ಘಟಕಗಳಿಗೆ ಇದರ ಲಾಭವಾಗಲಿದೆ. ಈ ಮೊತ್ತ ರೂ.18,000 ಕೋಟಿ ರೂ.ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.