ಕೊಲ್ಕತ್ತ: ಪಶ್ಚಿಮ ಬಂಗಾಳದ 14 ವರ್ಷದ ಬಾಲಕಿಯ ಗಂಟಲಿನೊಳಗೆ 10 ಸೂಜಿಗಳು ಪತ್ತೆಯಾಗಿವೆ! ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!
ಕೊಲ್ಕತ್ತಾದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಅಕ್ಷಯ್ ವಿದ್ಯಾಪೀಠದ 8 ನೇ ತರಗತಿ ವಿದ್ಯಾರ್ಥಿನಿ ಅಪ್ರೂಪ ಬಿಸ್ವಾಸ್(14), ಒಂದು ದಿನ ಶಾಲೆಯಿಂದ ಮನೆಗೆ ಬಂದ ನಂತರ ತೀವ್ರ ಗಂಟಲು ನೋಯುತ್ತಿರುವುದಾಗಿ ಹೇಳಿದ್ದಾಳೆ. ಬಹುಶಃ ಇದು ಸಾಮಾನ್ಯ ಗಂಟಲು ನೋವಿರಬಹುದು ಎಂದು ಆಕೆಯ ತಾಯಿ ಅದನ್ನು ನಿರ್ಲಕ್ಷಿಸಿ, ಊಟ ಬಡಿಸಲು ಮುಂದಾಗಿದ್ದಾರೆ. ಆದರೆ, ಊಟ ಮಾಡುವಾಗ ಅನ್ನ ನುಂಗಲಾಗದೆ ಆಕೆ ಪ್ರಜ್ಞೆತಪ್ಪಿದ್ದಾಳೆ. ಈ ಘಟನೆ 9 ದಿನಗಳ ಹಿಂದೆ ನಡೆದಿದ್ದು, ಕೂಡಲೇ ಆಕೆಯನ್ನು ಎನ್ಆರ್ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಆಕೆಯನ್ನು ಪರಿಶೀಲಿಸಿದ ವೈದ್ಯರು, ಆಕೆಯ ಗಂಟಲಲ್ಲಿ 10 ಸೂಜಿಗಳು ಸಿಕ್ಕಿಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನೋವಿಗೆ ಕಾರಣವೇನು ಎಂದು ಪರಿಶೀಲಿಸಲು ಆಕೆಯನ್ನು ಎಕ್ಸ್-ರೇಗೆ ಒಳಪಡಿಸಿದ್ದಾರೆ. ಆಗ ಆಕೆಯ ಗಂಟಲಲ್ಲಿ ಸೂಜಿಗಳು ಚುಚ್ಚಿಕೊಂಡಿರುವುದು ಪತ್ತೆಯಾಗಿದೆ. ಸೂಜಿಗಳು ಅನ್ನನಾಳ ಮತ್ತು ಗಂಟಲಿನ ನಡುವೆ ಸಿಲುಕಿರುವುದು ಆಕೆ ಆಹಾರ ಸೇವನೆಯನ್ನು ಅಸಾಧ್ಯವಾಗಿಸಿದೆ.
ಆಕೆಯ ಗಂಟಲಿನಿಂದ ಸೂಜಿಗಳನ್ನು ತೆಗೆಯಲು ಮಂಗಳವಾರ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಆದರೆ, ಅಷ್ಟೊಂದು ಸುಜಿಗಳು ಆಕೆಯ ಗಂಟಲಿನಲ್ಲೂ ಸಿಲುಕಲು ಏನು ಕಾರಣ ಎಂಬುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ವೈದ್ಯರೂ ಕೂಡ ಇದನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.