ನವದೆಹಲಿ: ಲಾಕ್ ಡೌನ್ ಸಮಯದಲ್ಲಿ, ವಿವಿಧ ಮೆಟ್ರೋ ನಗರಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಮರಳಿದ್ದಾರೆ. ಹಠಾತ್ ಲಾಕ್ ಡೌನ್ ಕಾರಣ ಈ ವಲಸೆ ಕಾರ್ಮಿಕರ ಮುಂದೆ ಜೀವನೋಪಾಯದ ಬಿಕ್ಕಟ್ಟು ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಕಾರ್ಮಿಕರಿಗೆ ತಕ್ಷಣದ ಉದ್ಯೋಗವನ್ನು ನೀಡಲು, ಕೇಂದ್ರ ಸರ್ಕಾರವು ಗರಿಬ್ ಕಲ್ಯಾಣ್ ರೋಜಗಾರ್ ಅಭಿಯಾನವನ್ನು ಘೋಷಿಸಿದೆ, ಇದನ್ನು ಜೂನ್ 20 ರಿಂದ ಬಿಹಾರದ ಹಳ್ಳಿಯಿಂದ ಆರಂಭಿಸಲಾಗುತ್ತಿದೆ. ಈ ಅಭಿಯಾನದಡಿಯಲ್ಲಿ ಕಾರ್ಮಿಕರಿಗೆ ವಿವಿಧ ಕೆಲಸಗಳ ಅಡಿ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು. ಸರ್ಕಾರ ಈ ಅಭಿಯಾನಕ್ಕಾಗಿ 50 ಸಾವಿರ ಕೋಟಿ ರೂ ಫಂಡ್ ಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಅಭಿಯಾನವನ್ನು ಆರಂಭಿಸಲಿದ್ದಾರೆ.
116 ಜಿಲ್ಲೆಗಳಲ್ಲಿ ನಡೆಯಲಿದೆ ಈ ಅಭಿಯಾನ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 125 ದಿನಗಳ ಕಾಲ ಬೃಹತ್ ಅಭಿಯಾನ ನಡೆಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಹೆಂದು ಹೇಳಿದ್ದಾರೆ. ಈ ಯೋಜನೆಗಾಗಿ ಪ್ರಸ್ತುತ ಒಟ್ಟು 6 ರಾಜ್ಯಗಳ ಸುಮಾರು 116 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಈ ಜಿಲ್ಲೆಗಳ ಸುಮಾರು 25 ಸಾವಿರ ವಲಸೆ ಕಾರ್ಮಿಕರಿಗೆ ಕೆಲಸ ನೀಡುವ ಗುರಿ ಹೊಂದಲಾಗಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸರ್ಕಾರಿ ತಂತ್ರ ಮಿಶನ್ ಮೋಡ್ ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
25 ಯೋಜನೆಗಳ ಅಡಿ ನಡೆಯಲಿವೆ ಈ ಕೆಲಸ
ಈ ಕುರಿತು ಮಾಹಿತಿ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಅಭಿಯಾನದ 125 ದಿನಗಳ ಕಾಲ 25 ಯೋಜನೆಗಳನ್ನು ಏಕಕಾಲಕ್ಕೆ ನಡೆಸಲಾಗುತ್ತಿದ್ದು, ಕೆಲಸದ ಅವಶ್ಯಕತೆ ಇರುವ ಕಾರ್ಮಿಕರಿಗೆ ಕೆಲಸ ನೀಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲ ಕಾರ್ಮಿಕರ ಕುಶಲತೆಯನ್ನು ಆಧರಿಸಿ ಅವರಿಗೆ ಕೆಲಸ ನೀಡಲಾಗುವದು. ಇದಕ್ಕಾಗಿ ವಿವಿಧ ವಿಭಾಗಗಳ 25 ಯೋಜನೆಗಳನ್ನು ಅಭಿಯಾನದಲ್ಲಿ ಸೇರಿಸಲಾಗಿದೆ.
ಮನೆಯಲ್ಲಿಯೇ ಕುಳಿತು 25, 250 ರೂ. ಗಳಿಕೆ ಮಾಡಬಹುದು
ಗರೀಬ್ ಕಲ್ಯಾಣ್ ಅಭಿಯಾನ ಯೋಜನೆಯ ಅಡಿ ಒಟ್ಟು 125 ದಿನಗಳ ಕೆಲಸ ನಡೆಯಲಿದೆ. ಇದರ ಅಡಿ ನಿತ್ಯ ಮನರೇಗಾ ಯೋಜನೆಯನ್ನು ಆಧಾರವಾಗಿಟ್ಟುಕೊಂಡು ನಿತ್ಯದ ವೇತನ ಪಾವತಿಸಲಾಗುವುದು. ಹೀಗಾಗಿ ನಿತ್ಯ ಓರ್ವ ಕಾರ್ಮಿಕರಿಗೆ ರೂ.202 ವೇತನ ಸಿಗಲಿದೆ. ಯಾವುದೇ ಓರ್ವ ಕಾರ್ಮಿಕ 125 ದಿನಗಳ ಕೆಲಸ ಪೂರ್ಣಗೊಳಿಸಿದರೆ, ಆತ ಈ ಯೋಜನೆಯ ಅಡಿ ಒಟ್ಟು ನಾಲ್ಕು ತಿಂಗಳ ಅವಧಿಯಲ್ಲಿ 25,250ರೂ. ಗಳಿಸಬಹುದು.
ಈ 25 ಕೆಲಸಗಳ ಮೇಲೆ ಗಮನ ಇರಲಿದೆ
- ಸಮುದಾಯ ನೈರ್ಮಲ್ಯ ಪರಿಸರ
- ಗ್ರಾಮ ಪಂಚಾಯಿತಿ ಭವನ
- ಹಣಕಾಸು ಆಯೋಗದ ನಿಧಿಯಡಿ ಮಾಡಬೇಕಾದ ಕೆಲಸ
- ರಾಷ್ಟ್ರೀಯ ಹೆದ್ದಾರಿ ಕೆಲಸ
- ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಕೆಲಸ
- ಬಾವಿಗಳ ನಿರ್ಮಾಣ
- ಸಸಿ ನೆಡುವಿಕೆ
- ತೋಟಗಾರಿಕೆ ಕೆಲಸ
- ಅಂಗನವಾಡಿ ಕೇಂದ್ರದ ಕೆಲಸ
- ಪ್ರಧಾನ್ ಮಂತ್ರಿ ಗ್ರಾಮೀಣ್ ಆವಾಸ್ ಯೋಜನೆ
- ಗ್ರಾಮೀಣ ರಸ್ತೆ ಮತ್ತು ಗಡಿ ರಸ್ತೆ ಕಾಮಗಾರಿ
- ಭಾರತೀಯ ರೈಲ್ವೆಯಡಿ ಕೆಲಸ
- ಶ್ಯಾಮಾ ಪ್ರಸಾದ್ ಮುಖರ್ಜಿ ಅರ್ಬನ್ ಮಿಷನ್
- ಭಾರತ್ ನೆಟ್ ಅಡಿಯಲ್ಲಿ ಫೈಬರ್ ಆಪ್ಟಿಕಲ್ ಕೇಬಲಿಂಗ್ ಕೆಲಸ
- ಪಿಎಂ ಕುಸುಮ್ ಯೋಜನೆ ಕೆಲಸ
- ವಾಟರ್ ಲೈಫ್ ಮಿಷನ್ ಅಡಿಯಲ್ಲಿ ಮಾಡಿದ ಕಾರ್ಯಗಳು
- ಪ್ರಧಾನ್ ಮಂತ್ರಿ ಉರ್ಜಾ ಗಂಗಾ ಯೋಜನೆ
- ಕೃಷಿ ವಿಜ್ಞಾನ ಕೇಂದ್ರದ ಅಡಿಯಲ್ಲಿ ಜೀವನೋಪಾಯ ತರಬೇತಿ
- ಜಿಲ್ಲಾ ಖನಿಜ ನಿಧಿಯಡಿ ಕೆಲಸ
- ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕೆಲಸ
- ಕೃಷಿ ಕೊಳ ಯೋಜನೆ ಕೆಲಸ
- ಅನಿಮಲ್ ಶೆಡ್ ನಿರ್ಮಾಣ
- ಕುರಿ / ಮೇಕೆಗಾಗಿ ಶೆಡ್ ನಿರ್ಮಾಣ
- ಕೋಳಿ ಸಾಕಣೆಗಾಗಿ ಶೆಡ್ ನಿರ್ಮಾಣ
- ಎರೆಹುಳು ಮಿಶ್ರಗೊಬ್ಬರ ಘಟಕ ತಯಾರಿಕೆ
ಕಾರ್ಮಿಕರನ್ನು ಹೇಗೆ ಗುರಿತಿಸಲಾಗುವುದು
ವಲಸೆ ಕಾರ್ಮಿಕರಿಗಾಗಿ ಓಡಿಸಲಾಗಿರುವ ಕಾರ್ಮಿಕ ವಿಶೇಷ ಟ್ರೈನ್ ಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳ ವತಿಯಿಂದ ಕಳುಹಿಸಲಾಗಿರುವ ಹಾಗೂ ಸರ್ಕಾರದ ಬಳಿ ಇರುವ ಕಾರ್ಮಿಕ ಪಟ್ಟಿಯಲ್ಲಿ ಈಗಾಗಲೇ ಹೆಸರಿರುವ ಕಾರ್ಮಿಕರನ್ನು ಗುರಿತಿಸಿ ಕೆಲಸ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇದಲ್ಲದೆ ವಿವಿಧ ರಾಜ್ಯಗಳಿಂದ ಪಲಾಯನಗೈದು, ಪಾದಯಾತ್ರೆಯ ಮೂಲಕ ತಮ್ಮ ತಮ್ಮ ಮನೆಗಳಿಗೆ ತಲುಪಿದವರ ಪಟ್ಟಿಯೂ ಕೂಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಬಳಿ ಇದ್ದು, ಕಾರ್ಮಿಕರು ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿ ಕೆಲಸ ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರೋಜಗಾರ್ ಅಭಿಯಾನದಡಿ ಕೆಲಸ ಮಾಡುವುದರಿಂದ ಹಿಡಿದು, ಕೆಲಸದ ವೇತನ ಪಾವತಿಸುವ ಕೆಲಸ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಅಧಿಕಾರಿಗಳೇ ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.