ಶ್ರೀನಗರ: ಗೃಹ ಸಚಿವ ಅಮಿತ್ ಶಾ ಇಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಕೆಲವೇ ಗಂಟೆಗಳ ಮೊದಲು ರಾಜ್ಯದ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಟ್ರಾಲ್ನ ಕಾಡುಗಳಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರನ್ನು ಹೊಡೆದುರುಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರದೇಶದಲ್ಲಿ ಈಗಲೂ ಎನ್ಕೌಂಟರ್ ಜಾರಿಯಲ್ಲಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಭದ್ರತಾ ಪಡೆ ಅರಣ್ಯವನ್ನು ಸುತ್ತುವರೆದಿದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಅಮಿತ್ ಶಾ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಶ್ರೀನಗರದಲ್ಲಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಶಾ ಮತ್ತು ಬಿಜೆಪಿ ಸರ್ಕಾರವು ಭಯೋತ್ಪಾದನೆ ಬಗ್ಗೆ ತಮ್ಮ ಶೂನ್ಯ-ಸಹಿಷ್ಣು ನೀತಿಯನ್ನು ಪದೇ ಪದೇ ಉಚ್ಚರಿಸುತ್ತಿದೆ. ಭಾರತದ ಶಾಂತಿ, ಭದ್ರತೆ ಮತ್ತು ಸಮಗ್ರತೆಯನ್ನು ಹಾಳುಮಾಡುವ ಯಾವುದೇ ದುಷ್ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದೆ.