ನವದೆಹಲಿ: ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಆಗಸ್ಟ್ 9 ರಂದು ಚುನಾವಣೆ ನಡೆಸುವುದಾಗಿ ಸೋಮವಾರ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಘೋಷಣೆ ಮಾಡಿದ್ದಾರೆ.
ಸಂಸತ್ತಿನ ಮೇಲ್ಮನೆಯಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡಿದ ವೆಂಕಯ್ಯ ನಾಯ್ಡು ಅವರು, ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ಎರಡನೇ ದಿನದಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಉಪ ಸಭಾಪತಿಯಾಗಿದ್ದ ಕಾಂಗ್ರೆಸ್ ನಾಯಕ ಪಿ.ಜೆ.ಕುರಿಯನ್ ಅವರು ಜುಲೈ 1ರಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಉಪ ಸಭಾಪತಿ ಸ್ಥಾನ ತೆರವುಗೊಂಡಿದೆ. ಕುರಿಯನ್ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು ತೆರವಾಗಿರುವ ಉಪಸಭಾಪತಿ ಸ್ಥಾನಕ್ಕೆ ಕುರಿಯನ್ ಅವರಂತೆಯೇ ಬಹುಮುಖ ವ್ಯಕ್ತಿತ್ವ ಹೊಂದಿವವರನ್ನು ಆಯ್ಕೆ ಮಾಡುವಂತೆ ವಿರೋಧ ಪಕ್ಷಗಳನ್ನು ಕೋರಿದ್ದಾರೆ.
"ಉಪ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಕುರಿಯನ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು, ಕಲಾಪಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದರು. ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ನಂಬಿದ್ದೇನೆ" ಎಂದು ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.