ನವ ದೆಹಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿರುವ ವಿಶೇಷ ಸಿಬಿಐ ನ್ಯಾಯಾಲಯ ಆದೇಶವನ್ನು ಮಂಗಳವಾರ ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ಅಲ್ಲದೆ ಮಧು ಕೋಡಾ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ದಂಡವನ್ನೂ ಮುಂದಿನ ವಿಚಾರಣೆವರೆಗೆ ತಡೆಹಿಡಿದಿದೆ.
ಈ ಹಿಂದೆ ವಿಶೇಷ ಸಿಬಿಐ ನ್ಯಾಯಾಲಯವು ಕೋಡಾ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಿತ್ತಲ್ಲದೆ, ಹೈಕೋರ್ಟ್ಗೆ ಮನವಿ ಸಲ್ಲಿಸಲು ಮಧು ಕೋಡಾ ಮತ್ತು ಇತರ ಮೂರು ಮಂದಿಗೆ ನ್ಯಾಯಾಲಯವು ಎರಡು ತಿಂಗಳ ಶಾಸನಬದ್ಧ ಮಧ್ಯಂತರ ಜಾಮೀನು ನೀಡಿತ್ತು.
ಜಾರ್ಖಂಡ್ ಕಲ್ಲಿದ್ದಲು ಹಗರಣದಲ್ಲಿ ಶಿಕ್ಷೆಗೊಳಗಾದ ಕೋಡಾ ಮತ್ತು ಇತರರ ವಿರುದ್ಧ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವಂತೆ ಸಿಬಿಐ ಆರಂಭದಲ್ಲಿ ನ್ಯಾಯಾಲಯವನ್ನು ಕೇಳಿತ್ತು. ವಿನಿ ಐರನ್ ಮತ್ತು ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಸುಲ್) ಕಂಪೆನಿಯೂ ಸೇರಿದಂತೆ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಮಾಜಿ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು, ಕೋಡಾ ಅವರ ನಿಕಟವರ್ತಿ ವಿಜಯ್ ಜೋಶಿ ಅವರುಗಳು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿಗಳ ಆರೋಪದಲ್ಲಿ ಅಪರಾಧಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ವಿಎಸ್ಯುಎಲ್ಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡದಂತೆ ಕಲ್ಲಿದ್ದಲು ಸಚಿವಾಲಯ ಮಾಡಿದ್ದ ಶಿಫಾರಸನ್ನು ಮರೆಮಾಚಿ, ಅದೇ ಸಂಸ್ಥೆಗೆ ನಿಕ್ಷೇಪ ಹಂಚಿಕೆ ಮಾಡುವಂತೆ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ನೇತೃತ್ವದ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಹೀಗೆ ಅಕ್ರಮವಾಗಿ ನಿಕ್ಷೇಪ ಹಂಚಿಕೆ ಮಾಡುವಲ್ಲಿ ಮಧು ಕೋಡಾ ಮತ್ತು ಸರ್ಕಾರದ ಅಧಿಕಾರಿಗಳು ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.