ನವದೆಹಲಿ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಅಧಿಕಾರದ ನಡುವಿನ ಹಗ್ಗ-ಜಗ್ಗಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸದಂತೆ ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಗೆ ಸಲಹೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಭೇಟಿಗೆ ಕೇಜ್ರಿವಾಲ್ ಸಮಯಾವಕಾಶ ಕೋರಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಭಾಗವನ್ನು ನಿರ್ಲಕ್ಷಿಸಲು ಗೃಹ ಸಚಿವಾಲಯ ಲೆಫ್ಟಿನೆಂಟ್ ಗವರ್ನರ್ಗೆ ಸಲಹೆ ನೀಡಿದೆ. ಗವರ್ನರ್ ಅಧಿಕಾರವನ್ನು ಕೇವಲ ಮೂರು ವಿಷಯಗಳಿಗೆ ಸೀಮಿತಗೊಳಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದಂತೆ ನಡೆದುಕೊಳ್ಳದಂತೆ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಗೆ ಸಲಹೆ ನೀಡುತ್ತಿರುವುದು ಅಪಾಯಕಾರಿಯಾಗಿದೆ ಎಂದು ಅವರು ದೂರಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಪೊಲೀಸ್, ಭೂ ಮತ್ತು ಸಾರ್ವಜನಿಕ ಆದೇಶ ಹೊರತುಪಡಿಸಿ ಇತರೆ ವಿಷಯಗಳಲ್ಲಿ ದೆಹಲಿ ಸರ್ಕಾರ ಕಾರ್ಯನಿರ್ವಾಹಕ ಅಧಿಕಾರ ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ.
ಗೃಹ ಸಚಿವಾಲಯದ 2015 ಅಧಿಸೂಚನೆಯು ನಿರಂತರವಾಗಿ ಮಾನ್ಯವಾಗಿದೆ. ಸೇವಾ ಇಲಾಖೆ ಲೆಫ್ಟಿನೆಂಟ್ ಗವರ್ನರ್ ಸುಪರ್ದಿಗೆ ಬರುತ್ತದೆ. ಸುಪ್ರೀಂಕೋರ್ಟ್ ತೀರ್ಪು ಇದಕ್ಕೆ ಅನ್ವಯಿಸುವುದಿಲ್ಲ ಎಂದು LG ಅನಿಲ್ ಬೈಜಾಲ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ನ ಐತಿಹಾಸಿಕ ತೀರ್ಪಿನ ನಂತರ ದೆಹಲಿ ಸರ್ಕಾರ ವಿವಿಧ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಮತ್ತು ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯೊಂದನ್ನು ದೆಹಲಿ ಸರ್ಕಾರ ರೂಪಿಸಿದೆ. ಅದನ್ನು ಅನುಷ್ಠಾನಕ್ಕೆ ತರಲು ಸೇವಾ ಇಲಾಖೆಯು ಸರ್ಕಾರದ ಸುಪರ್ದಿಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಸೇವಾ ಇಲಾಖೆಯ ಅಧಿಕಾರವನ್ನು ಹಸ್ತಾಂತರಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅನ್ನು ಶುಕ್ರವಾರ ಭೇಟಿ ಮಾಡಿ, ದೆಹಲಿ ಸಿಎಂ ಮನವಿ ಮಾಡಿಕೊಂಡಿದ್ದರು. ಆದರೆ ಆ ಮನವಿಯನ್ನು ಬೈಜಾಲ್ ತಿರಸ್ಕರಿಸಿದ್ದಾರೆ.