ನವದೆಹಲಿ: ಕೇಂದ್ರ ಸರ್ಕಾರದ ನೌಕರರಿಗೆ ದೀಪಾವಳಿ ಕೊಡುಗೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಬುಧವಾರ ಘೋಷಿಸಿದೆ. ಇದರಿಂದ ಸುಮಾರು 1.1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ನೇರ ಪ್ರಯೋಜನ ಪಡೆಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಡಿಎ (ತುಟ್ಟಿ ಭತ್ಯೆ) ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದು, ಈ ಬಾರಿ 5% ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದ್ದು, ಈ ಹಿಂದೆ ಇದ್ದ ಶೇ.12 ತುಟ್ಟಿಭತ್ಯೆ, ಇದೀಗ ಶೇ.15ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ನೌಕರರ ವೇತನವು ತಿಂಗಳಿಗೆ 900 ರೂ.ನಿಂದ 12,500 ರೂ.ಗಳವರೆಗೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು2019ರ ಜನವರಿಯಲ್ಲಿ ಕೇಂದ್ರ ಸರ್ಕಾರ ಶೇ.3ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಿತ್ತು. ಇದೀಗ ಮತ್ತೆ ಡಿಎ ಹೆಚ್ಚಳದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಈ ಬಾರಿ ಕೇಂದ್ರ ಸರ್ಕಾರಿ ನೌಕರರು ಅತಿ ಹೆಚ್ಚು ತುಟ್ಟಿಭತ್ಯೆ ಪಡೆದಂತಾಗಿದೆ. ಆದರೆ, ಇದರಿಂದ ಸರ್ಕಾರಕ್ಕೆ 16 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.
ಜುಲೈ 1ರಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಲಿದ್ದು, ಇದರಿಂದ 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.