ಆಧಾರ್ ಲಿಂಕ್ ಗಡುವು ಜೂನ್ 30ಕ್ಕೆ ವಿಸ್ತರಣೆ!

ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪಡೆಯಲು ಆಧಾರ್ ಮತ್ತು ಪಾನ್ ಸಂಖ್ಯೆ ಲಿಂಕ್ ಮಾಡಲು ಅಂತಿಮ ಅವಧಿಯನ್ನು ಜೂನ್ 30, 2018ರವರೆಗೆ ವಿಸ್ತರಿಸಲಾಗಿದೆ.

Last Updated : Mar 28, 2018, 07:52 PM IST
ಆಧಾರ್ ಲಿಂಕ್ ಗಡುವು ಜೂನ್ 30ಕ್ಕೆ ವಿಸ್ತರಣೆ! title=

ನವದೆಹಲಿ : ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪಡೆಯಲು ಆಧಾರ್ ಮತ್ತು ಪಾನ್ ಸಂಖ್ಯೆ ಲಿಂಕ್ ಮಾಡಲು ಅಂತಿಮ ಅವಧಿಯನ್ನು ಜೂನ್ 30, 2018ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಹಿಂದೆ ಆಧಾರ್ ಸಂಖೆ ಲಿಂಕ್ ಮಾಡಲು ಮಾರ್ಚ್.31 ಕಡೆಯ ದಿನವಾಗಿತ್ತು. 

ಸಂವಿಧಾನ ಪೀಠವು, ಆಧಾರ್‌ ಕ್ರಮಬದ್ಧತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ನೀಡುವವರೆಗೆ ಗಡುವನ್ನು ಅನಿರ್ದಿಷ್ಟಾವಧಿಗೆ ಈಗಾಗಲೇ ವಿಸ್ತರಿಸಿದ್ದು, ಇಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಅಂತಿಮ ಗಡುವನ್ನು ಜೂ.30ರವರೆಗೆ ನಿಗದಿಪಡಿಸಿದೆ. 

ಆದಾಯ ತೆರಿಗೆ ಇಲಾಖೆಯಿಂದ ಐ.ಟಿ ರಿಟರ್ನ್ ಮತ್ತು ಪ್ಯಾನ್‌ ಪಡೆಯಲು ಆಧಾರ್‌ ಸಂಖ್ಯೆ ನಮೂದಿಸುವುದನ್ನು ಸರ್ಕಾರ ಈಗ ಕಡ್ಡಾಯ ಮಾಡಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 ಎಎ (2) ಪ್ರಕಾರ, 2017ರ ಜುಲೈ 1ರಂದು ಪ್ಯಾನ್‌ ಹೊಂದಿದವರು ಮತ್ತು ಆಧಾರ್‌ ಹೊಂದಿದವರು, ತಮ್ಮ ಆಧಾರ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನಾನಾ ಸೇವೆಗಳನ್ನು ಪಡೆಯಲು ಆಧಾರ್‌ ಲಿಂಕ್‌ ಮಾಡಲು ಮಾರ್ಚ್‌ 31ರ ಗಡುವನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ, ಸಿಬಿಡಿಟಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಮಾರ್ಚ್‌ 5ರ ವೇಳೆಗೆ ಒಟ್ಟು 33 ಕೋಟಿ ಪಾನ್‌ ಕಾರ್ಡ್‌ಗಳ ಪೈಕಿ 16.65 ಕೋಟಿ ಪ್ಯಾನ್‌ ಸಂಖ್ಯೆಗಳು ಆಧಾರ್‌ ಜತೆ ಲಿಂಕ್‌ ಆಗಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 

Trending News